ರಾಯಚೂರು : ಹಿಂದುಳಿದ ಜಿಲ್ಲೆ ರಾಯಚೂರು ಸಚಿವ ಸ್ಥಾನದಿಂದ ವಂಚಿತವಾಗಿದೆ. ಬಿಜೆಪಿಯ ಸಚಿವ ಸ್ಥಾನ ಆಕಾಕ್ಷಿಯಾಗಿದ್ದ ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕರಿಗೆ ನಿರಾಶೆ ಉಂಟುಮಾಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಚಿವ ಸಂಪುಟ ರಚನೆ ಮಾಡಿದೆ. ಬಿಜೆಪಿಯ 16 ಜನರಿಗೆ ಹಾಗೂ ಪಕ್ಷೇತರ ಶಾಸಕ ಸೇರಿದಂತೆ 17 ಜನರಿಗೆ ಸಚಿವ ಸ್ಥಾನವನ್ನ ನೀಡಿದೆ. ಆದರೆ, ರಾಯಚೂರು ಜಿಲ್ಲೆ ಸಚಿವ ಸ್ಥಾನದಿಂದ ವಂಚಿತಗೊಂಡಿದ್ದು, ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಕೆ.ಶಿವನಗೌಡ ನಾಯಕ ದೂರವಾಣಿಯ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪಕ್ಷದ ಹೈಕಮಾಂಡ್ ಸಚಿವ ಸ್ಥಾನವನ್ನ ನೀಡುವ ಭರವಸೆಯಿತ್ತು. ಆದರೆ, ನೀಡಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ದನಾಗಿದ್ದು, ಅದನ್ನ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಜಿಲ್ಲೆ ಈಗ ಖ್ಯಾತಿ-ಅಪಖ್ಯಾತಿ ಪಡೆದಿದೆ. ಆಪರೇಷನ್ ಕಮಲಕ್ಕೆ ಆರೋಪ ಹೊತ್ತ ಮಸ್ಕಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು. ಕಾಂಗ್ರೆಸ್ ಪ್ರತಾಪ್ ಗೌಡ ಪಾಟೀಲ್ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು. ಕಾಂಗ್ರೆಸ್ ನಡೆಯನ್ನ ಪ್ರಶ್ನಿಸಿ ಪ್ರತಾಪ್ ಗೌಡ ಕೋರ್ಟ್ ಮೊರೆ ಹೋಗಿದ್ದಾರೆ.
2009ರಲ್ಲಿ ನಡೆದ ಆಪರೇಷನ್ ಕಮಲಕ್ಕೆ ಈಗಿನ ಕೆ.ಶಿವನಗೌಡ ನಾಯಕ ಬಿಜೆಪಿ ಸೇರ್ಪಡೆಗೊಂಡರು. ಆಗ ರಾಜ್ಯದಲ್ಲಿ ಕಮಲ ಪಕ್ಷಕ್ಕೆ ಅಧಿಕಾರ ಬರಲು ಸಾಧ್ಯವಾಗಿತ್ತು. ಇದರ ಫಲವಾಗಿ ಜಿಲ್ಲೆಗೆ ಸಚಿವ ಸ್ಥಾನ ನೀಡಿತ್ತು. ಆದರೆ, ಇಂದು ನಡೆದ ಸಚಿವ ಸಂಪುಟ ರಚನೆಯಲ್ಲಿ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತಗೊಂಡಿದೆ. ಇನ್ನು ಮುಂದಿನ ಬಾರಿಯಾದ್ರೂ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗುತ್ತೇನೋ ಅಂತಾ ಕಾದು ನೋಡಬೇಕಿದೆ.