ರಾಯಚೂರು: ಕೃಷ್ಣಾ ನದಿ ವ್ಯಾಪ್ತಿಗೆ ಬರುವಂತಹ ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳಗೊಂಡು, ನದಿಗೆ ನೂರಾರು ಟಿಎಂಸಿ ನೀರು ಬಿಡಲಾಗಿದೆ.
ನಾರಾಯಣ ಜಲಾಶಯದಿಂದ ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಇದರಲ್ಲಿ ರಾಯಚೂರು ಜಿಲ್ಲೆಯ ನಾರಾಯಣಪುರ ಬಲದಂಡ ಕಾಲುವೆ(ಎನ್ ಆರ್ ಬಿಸಿ)ಯೋಜನೆಯಿಂದ ರೈತರ ಜಮೀನಿಗಳಿಗೆ ನೀರು ಪೂರೈಸಲಾಗುತ್ತದೆ.
ಕಳೆದ ವರ್ಷ ಬರಗಾಲದಿಂದ ಜಲಾಶಯಕ್ಕೆ ನೀರು ಹರಿಯದ ಪರಿಣಾಮ ರೈತರಿಗೆ ನೀರಿನ ಸಮಸ್ಯೆ ಉಂಟಾಗಿತ್ತು. ಆದ್ರೆ ಈ ಬಾರಿ ಜಲಾಶಯ ಭರ್ತಿಯಾಗಿ ಹೆಚ್ಚುವರಿಯ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಬಂದಿದೆ. 2019 ಜುಲೈ 28ರಿಂದ 2019 ಆ. 20ರವರೆಗೆ ಬರೋಬ್ಬರಿ 700 ಟಿಎಂಸಿ ಹೆಚ್ಚುವರಿ ನೀರನ್ನ ಕೃಷ್ಣಾ ನದಿಗೆ ಬಿಡುವ ಮೂಲಕ ನೀರು ಆಂಧ್ರ ಪಾಲಾಗಿದೆ.
ಕೃಷ್ಣಾ ನದಿ ರಾಯಚೂರು ಜಿಲ್ಲೆಯ ಬಲ ಭಾಗದ ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನಲ್ಲಿ 183.7 ಕಿಲೋ ಮೀಟರ್ವರೆಗೆ ವಿಶಾಲವಾಗಿ ಹರಿಯುತ್ತದೆ. 700 ಟಿಎಂಸಿಯಷ್ಟು ನೀರು ಹರಿದು ಹೋಗಿರುವುದರಿಂದ ನದಿ ಪಾತ್ರದ ಗ್ರಾಮಗಳಿಗೆ ತೊಂದರೆ ಉಂಟು ಮಾಡಿದೆ. ರೈತರ ಹೊಲ-ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.