ಬೆಳಗಾವಿ/ ರಾಯಚೂರು: ಕರೆಯಲ್ಲಿ ಮುಳುಗಿ ಚಿಕಪ್ಪ ಹಾಗೂ ಮಗ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಕೊರ್ತಕುಂದಾ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಮಗನ ಸಾವಿನ ಸುದ್ದಿ ಕೇಳಿ ತಾಯಿಗೆ ಹೃದಯಾಘಾತವಾದ ಹೃದಯ ವಿದ್ರಾವಕ ಘಟನೆ ನಡೆಯಿತು.
ಮಗನ ರಕ್ಷಿಸಲು ಹೋಗಿದ್ದ ಚಿಕ್ಕಪ್ಪ: ಕೊರ್ತಕುಂದಾ ಗ್ರಾಮದ ಹೊರ ವಲಯದಲ್ಲಿರುವ ಕೆರೆಯಲ್ಲಿ ಚಿಕ್ಕಪ್ಪ, ಮಗ ಮುಳುಗಿ ಮೃತಪಟ್ಟಿದ್ದಾರೆ. ಕೊರ್ತಕುಂದಾ ಗ್ರಾಮದ ಸಲಿಂ ಹುಸೇನಸಾಬ್ (32) ಹಾಗೂ ಅವರ ಅಣ್ಣನ ಮಗ ಯಾಸೀನ್ ರಫಿ (13) ಮೃತರೆಂದು ಗುರುತಿಸಲಾಗಿದೆ. ಮೃತ ಸಲಿಂ ನರೇಗಾ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಅವರ ಅಣ್ಣನ ಮಗ ಯಾಸೀನ್ ಕೂಡ ಜೊತೆಗೆ ಹೋಗಿದ್ದ. ತಮ್ಮ ಚಿಕ್ಕಪ್ಪ ಕೆಲಸದಲ್ಲಿ ತೊಡಗಿದ್ದ ವೇಳೆ ಯಾಸೀನ್ ಕುಡಿಯಲು ನೀರು ತೆಗೆದುಕೊಂಡು ಬರಲು ಕೆರೆಗೆ ತೆರಳಿದ್ದ. ಈ ಸಂದರ್ಭದಲ್ಲಿ ಕಾಲು ಜಾರಿ ಯಾಸೀನ್ ಕೆರೆಯಲ್ಲಿ ಬಿದ್ದಿದ್ದನು. ಈಜು ಬಾರದ ಬಾಲಕನ ಕೂಗಾಟ, ಚೀರಾಟ ಕೇಳಿ ಸಲೀಂ ಕೆರೆ ಬಳಿ ಓಡಿ ಬಂದು ರಕ್ಷಣೆಗೆ ಮುಂದಾಗಿದ್ದ. ಆದ್ರೆ ರಕ್ಷಣೆಗೆ ಧಾವಿಸಿದ ಚಿಕ್ಕಪ್ಪ ಹಾಗೂ ಬಾಲಕ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ವಿಷಯ ತಿಳಿದು ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಆಗಮಿಸಿ, ಶವಗಳನ್ನು ಕೆರೆಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದಲ್ಲಿ ಬುಧವಾರ ಮಗನ ಸಾವಿನ ಸುದ್ದಿ ಕೇಳಿದ ತಾಯಿ ಹೃದಯಾಘಾತದಿಂದ ಮೃತಪಟ್ಟರು. ರುದ್ರವ್ವ ತಳವಾರ (70) ಸಾವನ್ನಪ್ಪಿದವರು. ಹಣ್ಣಿನ ವ್ಯಾಪಾರಿಯಾಗಿದ್ದ ಬಾಳಪ್ಪ ತಳವಾರ (50) ಮರದಿಂದ ಬಿದ್ದು ಸಾವನ್ನಪ್ಪಿದವರು.
ಮೃತ ಬಾಳಪ್ಪ ತಳವಾರ ಅವರು ಕುಟುಂಬ ನಿರ್ವಹಣೆಗಾಗಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಪ್ರತಿದಿನದಂತೆ ನಿನ್ನೆ ಸಂಜೆ ಹಣ್ಣು ಕೀಳಲೆಂದು ನೇರಳೆ ಮರ ಹತ್ತಿದ್ದಾರೆ. ಈ ವೇಳೆ ಆಯತಪ್ಪಿ ಮರದ ಮೇಲಿಂದ ಬಿದ್ದು ಬಾಳಪ್ಪ ಸ್ಥಳದಲ್ಲೇ ಮೃತರಾಗಿದ್ದರು. ಈ ಸುದ್ದಿ ಕೇಳಿದ ಬಾಳಪ್ಪ ಅವರ ತಾಯಿಗೆ ಹೃದಯಾಘಾತವಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಬಡಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕೊಲೆಗೆ ಯತ್ನ: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಲು ಯತ್ನಿಸಿರುವ ಘಟನೆ ಜರುಗಿದೆ. ಮಲ್ಲಟ ಗ್ರಾಮದ ಹೊರವಲಯದಲ್ಲಿ ಬರುವ ಸೋಲಾರ್ ಪ್ಲಾಟ್ ಹತ್ತಿರ ಈ ಘಟನೆ ಸಂಭವಿಸಿದೆ. ಕವಿತಾಳ ಗ್ರಾಮದ ಶಿವು ಹಲ್ಲೆಗೊಳದ ವ್ಯಕ್ತಿಯಾಗಿದ್ದಾನೆ ಎಂದು ಗುರುತಿಸಲಾಗಿದೆ. ರಾಯಚೂರಿನಿಂದ ಲಿಂಗಸೂಗೂರುಗೆ ಬೈಕ್‌ನಲ್ಲಿ ತೆರಳುವ ವೇಳೆ ಇಬ್ಬರು ದುರ್ಷ್ಕಮಿಗಳು ದಾಳಿ ಮಾಡಿ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿದ್ದು, ಮುಖಕ್ಕೆ ಗಂಭೀರವಾಗಿ ಗಾಯಗಳಾಗಿವೆ.