ರಾಯಚೂರು: ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಹಾಗೂ ಪ್ರವಾಹಕ್ಕೆ ತುತ್ತಾಗಿರುವ ಗ್ರಾಮಗಳಿಗೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭೇಟಿ ನೀಡಿ ಪರಿಶೀಲಿಸಿದರು.
ಮಳೆಯಿಂದ ಹಾನಿಗೊಳಗಾದ ಗ್ರಾಮಗಳಾದ ರಾಂಪುರ್, ಅತ್ಕೂರ್,ಚಂದ್ರಬಂಡಾ, ಸರ್ಜಾಪುರ,ಪೂರ್ತಿಪಾಡ್, ಯಾಪಲದಿನ್ನಿ ಹಾಗೂ ಗಾಜರಾಳ ಗ್ರಾಮಗಳಿಗೆ ಭೇಟಿ ನೀಡಿ, ಹಾನಿಗೊಳಗಾದ ಮನೆಗಳನ್ನು ಮತ್ತು ರಸ್ತೆಗಳನ್ನು ವೀಕ್ಷಣೆ ಮಾಡಿದರು.
ನಂತರ ಮಾತನಾಡಿದ ಅವರು, ಭೀಮಾ ಮತ್ತು ಕೃಷ್ಣಾ ನದಿಗಳ ಪ್ರವಾಹದಿಂದ ಪ್ರತೀ ವರ್ಷ ಈ ಭಾಗದ ಗ್ರಾಮಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಅಲ್ಲದೇ ರೈತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ ಬೆಳೆ ನಷ್ಟ ಪರಿಹಾರ ಕುರಿತು ಅಧಿಕಾರಿಗಳಿಗೆ ಸಂಪೂರ್ಣ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದ್ದೇನೆ ಎಂದರು.
ಬೆಳೆ ಹಾನಿ ಪರಿಹಾರವನ್ನು ಶೀಘ್ರವಾಗಿ ಮಂಜೂರು ಮಾಡಿಸಲು ಸರ್ಕಾರದ ಹಂತದಲ್ಲಿ ಒತ್ತಾಯಿಸುವುದಾಗಿಯೂ ಅವರು ಭರವಸೆ ನೀಡಿದರು.
ಕಳೆದ ಮೂರು ವರ್ಷದಿಂದ ಕೃಷ್ಣಾನದಿಗೆ ಬ್ರಿಡ್ಜ್ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಪ್ರತಿ ಸಭೆಯಲ್ಲಿ ಒತ್ತಾಯ ಕೇಳಿ ಬಂದಿದೆ. ಆದರೂ ಕಾಮಗಾರಿಗಳು ಅಪೂರ್ಣಗೊಂಡಿರುವುದಕ್ಕೆ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂಗಮೇಶ್ ಭಂಡಾರಿ, ಭಾಸ್ಕರ್ ಗೌಡ ,ಕರಿಯಪ್ಪ ನಾಯಕ್, ಉಮೇಶ್ ಪಾಟೀಲ್, ಲಕ್ಷ್ಮಣ ಸಗಮಕುಂಟಾ,ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.