ರಾಯಚೂರು: ರಾಜಕೀಯದಲ್ಲಿ ಆಪರೇಷನ್ ಅನ್ನೋದು ಕೆಟ್ಟ ಶಬ್ಧ, ದೇಶದಲ್ಲಿ ಆಪರೇಶನ್ ಆರಂಭಿಸಿದ್ದು ಬಿಜೆಪಿ ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸ್‌ರಾಜು ಹೇಳಿದ್ದಾರೆ. ನಗರದಲ್ಲಿರುವ ಅವರ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ನಾವು ಆಪರೇಷನ್ ಅನ್ನೋ ಪದ ಬಳಸಲ್ಲ. ಆಪರೇಷನ್ ಅನ್ನೋದು ಕೆಟ್ಟ ಶಬ್ದವಾಗಿದೆ. ಇಡೀ ದೇಶದ ಇತಿಹಾಸದಲ್ಲಿ ಬಿಜೆಪಿ ಆಪರೇಷನ್ ಮಾಡಿದ್ದು. ಆ ಕೆಟ್ಟ ಶಬ್ಧ ಉಪಯೋಗ ಮಾಡಲಿಕ್ಕೆ ನಮ್ಮ ಪಕ್ಷ ತಯಾರಿಲ್ಲ. ಬಿಜೆಪಿ ಮಧ್ಯಪ್ರದೇಶ, ಗೋವಾ ಸೇರಿದಂತೆ ಅನೇಕ ಕಡೆ ಆಪರೇಷನ್ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಕೆಟ್ಟ ಹೆಸರು ತಂದಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರೋ ಪಕ್ಷ ನಮ್ಮದು. ನಮ್ಮದು ಆಪರೇಷನ್ ಅಲ್ಲ ಕೋ ಆಪರೇಷನ್ ಅಷ್ಟೇ ಎಂದರು.
ಬಿಜೆಪಿ ಮಾಜಿ ಶಾಸಕ ರೇಣುಕಾಚಾರ್ಯ ಸಿಎಂ ಭೇಟಿ ಮಾಡಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ತೊರೆದು ಬರುವವರು ಅನೇಕರಿದ್ದಾರೆ. ಆದರೇ ನಮ್ಮ ಪಕ್ಷ ಸ್ಥಳೀಯ ಕಾರ್ಯಕರ್ತರು ಮತ್ತು ಮುಖಂಡರ ಬಗ್ಗೆ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.
ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ಶಿವಶಕ್ತಿ ಎಂದು ಕರೆಯಲು ಪ್ರಧಾನಿ ತೀರ್ಮಾನಿಸಿರುವ ವಿಚಾರವಾಗಿ ಮಾತನಾಡಿ, ರಾಜ್ಯದ ಜನ, ದೇಶದ ಜನ ಈ ಬಗ್ಗೆ ತೀರ್ಮಾನ ಮಾಡಬೇಕು. ಅವರು ಏನು ಮಾಡ್ತಿದ್ದಾರೆ, ಯಾವ ಕಾರಣಕ್ಕೆ ಮಾಡ್ತಿದ್ದಾರೆ, ಯಾವ ಆಧಾರದ ಮೇಲೆ ಮಾಡ್ತಾರೆ ಅನ್ನೋದರ ಬಗ್ಗೆ ಜನರೇ ತೀರ್ಮಾನ ಕೈಗೊಳ್ಳುತ್ತಾರೆ. ನಾವೇನಾದ್ರು ಹೇಳಿದರೆ ಕಾಮೆಂಟ್ ಶುರುವಾಗುತ್ತೆ. ಹಾಗಾಗಿ ಈ ಬಗ್ಗೆ ನಾನು ಏನನ್ನೂ ಹೇಳಲ್ಲ ಎಂದರು.
ಇಸ್ರೋಗೆ ಪ್ರಧಾನಿ ಭೇಟಿ ವೇಳೆ ಸರ್ಕಾರಕ್ಕೆ ಆಹ್ವಾನ ನೀಡಿಲ್ಲ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಹಿಂದೆ ಪ್ರಧಾನಿ ಅವರು ರಾಜ್ಯಕ್ಕೆ ಬಂದಾಗ ಅವರದೇ ಪಕ್ಷದ ಸಿಎಂ ಆಗಿದ್ದ ಬಿ ಎಸ್ ಯಡಿಯೂರಪ್ಪರನ್ನೇ ಕರೆದಿರಲಿಲ್ಲ. ಹಾಗಾಗಿ ಈ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ಅವರು ಪ್ರಧಾನ ಮಂತ್ರಿಗಳು, ಅವರ ಶಿಷ್ಟಾಚಾರ ಏನಿದೆ ನನಗೆ ಗೊತ್ತಿಲ್ಲ. ನಮ್ಮನ್ನ ಕರೆದಿದ್ರೆ ಸರ್ಕಾರದ ಪರ ಯಾರಾದ್ರು ಪ್ರತಿನಿಧಿಸುತ್ತಿದ್ವಿ ಎಂದು ಹೇಳಿದ್ರು.
ವಿಧಾನಸೌಧದ ಬ್ಯಾಂಕ್ವಿಟ್ ಹಾಲ್ನಲ್ಲಿ ಚಂದ್ರಯಾನ3 ಯೋಜನೆ ಯಶಸ್ವಿಯಾದ ಹಿನ್ನೆಲೆ ಸರ್ಕಾರ ಮತ್ತು ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಡೆಯಿಂದ ಸನ್ಮಾನ ಕಾರ್ಯಕ್ರಮ ಮಾಡುವುದಾಗಿ ವಿಜ್ಞಾನಿಗಳಿಗೆ ಆಹ್ವಾನ ಕೊಟ್ಟುಬಂದಿದ್ದೇವೆ ಎಂದರು.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ