ರಾಯಚೂರು: ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯ ಜಾರಿಗೆ ಆಗ್ರಹಿಸಿ ಡಿ. 11ರಂದು ಬೆಂಗಳೂರಿನಲ್ಲಿ 10 ಲಕ್ಷ ಜನರೊಂದಿಗೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ಮುಖಂಡ ನರಸಪ್ಪ ದಂಡೋರಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಹಕ್ಕು ರಾಜ್ಯ ಸರ್ಕಾರಗಳಿಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿರುವುದು ಹೋರಾಟ ಸಮಿತಿ ಸ್ವಾಗತಿಸುತ್ತದೆ. ಆದರೆ ವರದಿಯ ವಿಳಂಬಕ್ಕೆ ರಾಜಕೀಯ ಪಕ್ಷಗಳು ಕಾರಣವಾಗಿವೆ. ಕೂಡಲೇ ಸರ್ವ ಪಕ್ಷಗಳ ವಿಶೇಷ ಅಧಿವೇಶನವನ್ನು ಕರೆದು ಸರ್ವಾನುಮತದಿಂದ ಒಳಮೀಸಲಾತಿ ಅಂಗೀಕರಿಸಬೇಕು, ಸದಾಶಿವ ವರದಿ ಜಾರಿಗೆ ಹೋರಾಟ ಸಮನ್ವಯ ಸಮಿತಿ ಜೊತೆಗೆ ಮಾದಿಗ ದಂಡೋರ ಸಂಘಟನೆ ಸಹಯೋಗದಲ್ಲಿ ಅ.21 ರಿಂದ ಡಿ.11 ವರೆಗೆ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯದ 36 ಮೀಸಲಾತಿ ಕ್ಷೇತ್ರಗಳಲ್ಲಿ 16 ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯದ ರಾಜಕಾರಣಿಗಳನ್ನು ಆಯ್ಕೆ ಮಾಡಲು ಕಾರ್ಯತಂತ್ರ ರೂಪಿಸುವುದು, ಡಿ.11 ರೊಳಗೆ ಒಳಮೀಸಲಾತಿಯನ್ನು ಅಂಗೀಕರಿಸದಿದ್ದಲ್ಲಿ ಸಮುದಾಯದ ಸ್ವಾಮೀಜಿಗಳು, ರಾಜಕಾರಣಿಗಳ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಲು ನಿರ್ಣಯಿಸಲಾಗಿದೆ. ಒಳಮೀಸಲಾತಿ ಜಾರಿಗೆ ಇದು ಅಂತಿಮ ಹೋರಾಟ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ವಿಶೇಷ ಅಧಿವೇಶನ ಕರೆದು ಸದಾಶಿವ ವರದಿ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.