ರಾಯಚೂರು: ಶೀಘ್ರದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬರಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಜಿಲ್ಲೆಯ ಮಸ್ಕಿ ತಾಲೂಕಿನ ಬುದ್ದಿನ್ನಿ ಗ್ರಾಮದ ನಂದವಾಡಗಿ ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನನ್ನದು ಎಷ್ಟು ಪ್ರಮುಖ ಪಾತ್ರವಿದೆ ಅದರಷ್ಟೇ ಪ್ರಮುಖ ಪಾತ್ರ ಪ್ರತಾಪ್ ಗೌಡ ಪಾಟೀಲರದ್ದೂ ಇದೆ. ಹೀಗಾಗಿ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಶೀಘ್ರದಲ್ಲೇ ಬರಲಿದೆ. ಆಗ ಸ್ಪರ್ಧೆ ಮಾಡಿ ಗೆಲುವು ಸಾಧಿಸುತ್ತಾರೆ. ಗೆದ್ದ ಮೇಲೆ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಾಪ್ ಗೌಡರನ್ನು ಬೈ ಎಲೆಕ್ಷನ್ನಲ್ಲಿ ಗೆಲ್ಲಿಸಬೇಕು. ಅವರನ್ನ ಗೆಲ್ಲಿಸಿದರೆ ನಾನು ಈ ಭಾಗದ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಕಳಪೆಯಾಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಅಕ್ರಮ ನೀರಾವರಿ ಕುರಿತಂತೆ ರೈತರಿಂದ, ರಾಜಕೀಯ ನಾಯಕರಿಂದ ದೂರು ಬಂದಿದೆ. ಈ ಬಗ್ಗೆ ತನಿಖೆ ನಡೆಸಿ, ವರದಿ ತರಿಸಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಮಾಡುವುದಿಲ್ಲ. ಜನ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಕೊರೊನಾ ತೊಲಗಿಸಬೇಕಾಗಿದೆ. ಕೊರೊನಾ ದೊಡ್ಡ ರೋಗವೇನೂ ಅಲ್ಲ ಎಂದರು.