ರಾಯೂರು: 17 ಜನ ಅನರ್ಹ ಶಾಸಕರ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಹೊರಬಂದ ಬಳಿಕ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
ಚುನಾವಣಾ ಆಯೋಗವು 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮಾತ್ರ ಉಪಚುನಾವಣೆ ನಿಗದಿ ಮಾಡಿದೆ. ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳ ಉಪಚುನಾವಣೆ ನಿಗದಿಯಾಗಿಲ್ಲ. ಹೀಗಾಗಿ, ಪರಿಶಿಷ್ಟ ಪಂಗಡಕ್ಕೆ ಮೀಸಲು ಇರುವ ಮಸ್ಕಿ ಕ್ಷೇತ್ರದಲ್ಲಿ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಬಿಜೆಪಿ ಸೇರಿದ್ದು, ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಖಚಿತ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಅವರ ಸ್ಪರ್ಧೆ ಖಚಿತಗೊಂಡರು, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಬಸವನಗೌಡ ತುರುವಿಹಾಳ ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ, ಮಸ್ಕಿ ಕ್ಷೇತ್ರದ ಉಪಚುನಾವಣೆ ದಿನಾಂಕ ನಿಗದಿಗೊಳಿಸಿಲ್ಲ. ದಾವೆ ಹೂಡಿರುವ ಪ್ರಕರಣವನ್ನ ಹಿಂದಕ್ಕೆ ತೆಗೆದುಕೊಳ್ಳುವಂತೆ ಹೈಕಮಾಂಡ್ ಒತ್ತಡದ ಜತೆಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಕಲ್ಪಿಸಿದ್ದು, ಬಸವನಗೌಡ ಅವರು ತಮ್ಮ ದೂರು ಹಿಂದಕ್ಕೆ ತೆಗೆದುಕೊಳ್ಳುತ್ತಾರಾ ಅಥವಾ ಉಪಚುನಾವಣೆಯಲ್ಲಿ ಬೇರೊಂದು ಪಕ್ಷದಿಂದ ಸ್ಪರ್ಧಿಸುವರೇ ಎನ್ನುವ ನಡೆ ಬಾರಿ ಕೂತೂಹಲಕ್ಕೆ ಕಾರಣವಾಗಿದೆ.
ಸುಪ್ರೀಂಕೋರ್ಟ್ ಅನರ್ಹ ಶಾಸಕರ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಮೊದಲಿನಿಂದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಬಸವನಗೌಡ ಅವರಿಗೆ ಪ್ರತಾಪಗೌಡ ಪಾಟೀಲ್ ಅಡ್ಡಿಯಾಗಿದ್ದರು. ಆಗ ಬಿಜೆಪಿ ಸರ್ಕಾರ ಬಸವನಗೌಡಗೆ ಸಚಿವ ಸಂಪುಟ ದರ್ಜೆಯ ಕಾಡಾ ಅಧ್ಯಕ್ಷ ಸ್ಥಾನ ನೀಡಿತು. ಆದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಇರಿಸಿಕೊಂಡಿದ್ದರಿಂದ ಕಾಡಾ ಅಧ್ಯಕ್ಷ ಸ್ಥಾನ ಸ್ವೀಕರಿಸಲು ಆರಂಭದಲ್ಲಿ ಹಿಂದೇಟು ಹಾಕಿದರು. ಪಕ್ಷದ ಒತ್ತಡಕ್ಕೆ ಮಣಿದು ಅಧ್ಯಕ್ಷ ಸ್ಥಾನ ಸ್ವೀಕರಿಸಿದರು. ಇದೀಗ ಸುಪ್ರೀಂಕೋರ್ಟ್ನ ತೀರ್ಪು ನೆಮ್ಮದಿ ತರಿಸಿದ್ದು, ಒಂದು ವೇಳೆ ಬಸವನಗೌಡ ಅವರು ಸ್ಪರ್ಧೆಗೆ ಬಯಸಿದರೇ ಪ್ರತಾಪಗೌಡ ಪಾಟೀಲರ ಸುಲಭದ ಹಾದಿ ಇನ್ನಷ್ಟು ಕಠಿಣವಾಗಲಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಅಭ್ಯರ್ಥಿಗೆ ಪ್ರಬಲ ಸ್ಪರ್ಧೆ ನೀಡಲು ಕಾಂಗ್ರೆಸ್ ಅಭ್ಯರ್ಥಿಗಳ ಹುಡಕಾಟದಲ್ಲಿ ನಿರತವಾಗಿದೆ. ಆರಂಭದಲ್ಲಿ ಮಾಜಿ ಸಂಸದ ಬಿ.ವಿ. ನಾಯಕ ಹೆಸರು ಕೇಳಿ ಬಂದಿತ್ತು. ಆದರೆ, ಅವರು ಉಪಚುನಾವಣೆಯಲ್ಲಿ ಸ್ಪರ್ಧೆಗೆ ಹಿಂದೇಟು ಹಾಕಿದರು. ಈ ಹಿಂದೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ತಿಮ್ಮಯ್ಯ ನಾಯಕ ಅವರು ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾರೆ. ಯಾರನ್ನು ಕಣಕ್ಕಿಳಿಸಬೇಕು ಎಂದು ಕಾಂಗ್ರೆಸ್ ಇನ್ನೂ ತನ್ನ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ.