ಲಿಂಗಸುಗೂರು: ಕೋವಿಡ್ ನಿಯಮಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ನಿಯಮಗಳು ಬರಲಿವೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸರು ಅಗತ್ಯಬಿದ್ದಲ್ಲಿ ಗೃಹರಕ್ಷಕ ದಳ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಿ. ಮುಂಬರುವ ದಿನಗಳಲ್ಲಿ ಲಾಕ್ಡೌನ್ ನಿಯಮಗಳ ಮತ್ತಷ್ಟು ಕಠಿಣಗೊಳ್ಳಲ್ಲಿವೆ ಎಂದರು.
ಮುಂದಿನ 10-14 ದಿನಗಳಲ್ಲಿ ಅತ್ಯಂತ ಕಠಿಣವಾಗಲಿದೆ. ಪರಿಸ್ಥಿತಿ ಅರಿತು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಸರ್ಕಾರ ಮಾರ್ಗಸೂಚಿ ಪಾಲಿಸಿದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ. ಆದ ಕಾರಣ ಅಗತ್ಯವಸ್ತುಗಳ ಖರೀದಿ ಮಾಡುವ ವ್ಯವಸ್ಥೆಯಲ್ಲೂ ಕಳೆದ ಬಾರಿಯಂತೆ ಲಾಕ್ಡೌನ್ನಲ್ಲಿ ಅನುಸರಿಸಿದ ಕ್ರಮಗಳನ್ನೇ ಅನುಸರಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಹೇಳಿದರು.
ತಾಲೂಕು ಆಸ್ಪತ್ರೆಗಳಲ್ಲಿ ಕೂಡಲೇ ವೆಂಟಿಲೇಟರ್ ಕಾರ್ಯಾರಂಭ ಮಾಡಬೇಕು. ಇಬ್ಬರು ಸ್ಟಾಪ್ ನರ್ಸ್ ತರಬೇತಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ನಿಯೋಜನೆ ಮಾಡಬೇಕೆಂದು ತಿಳಿಸಿದರು.
ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ಕೊರತೆ ಆಗಬಾರದು. ಔಷಧಿ ಕೊರತೆ ಕಂಡುಬಂದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ನೇರವಾಗಿ ಹೊಣೆಯಾಗುತ್ತಾರೆ ಎಂದರು.
ಪ್ರತಿದಿನ ಕೋವಿಡ್ ಆಸ್ಪತ್ರೆಯ ಬೆಡ್ಗಳು ವಿವರ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಾಸ್ಕ್ ಧರಿಸದಿದ್ದಲ್ಲಿ ಹಾಗೂ ಅಂತರ ಕಾಯ್ದುಕೊಳ್ಳಲು ಇದ್ದಲ್ಲಿ ಮತ್ತು ನಿಯಮ ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಲಿಂಗಸೂಗೂರು ಎಸಿ ರಾಜಶೇಖರ ಡಂಬಳ, ತಾ.ಪಂ ಇಒ, ಡಿವೈಎಸ್ ಪಿ, ಸೆಕ್ಟರ್ ಅಧಿಕಾರಿಗಳು ಇದ್ದರು.