ರಾಯಚೂರು: ಸಿ.ಟಿ.ರವಿಗೆ ಯಾವ ಚರಿತ್ರೆ ,ಇತಿಹಾಸ ಗೊತ್ತಿದೆ?. ನೆಹರು, ಇಂದಿರಾ ಗಾಂಧಿ ತ್ಯಾಗ ಬಲಿದಾನಗಳ ಬಗ್ಗೆ ಇವರಿಗೆ ಏನು ಗೊತ್ತಿದೆ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ನೆಹರು, ಇಂದಿರಾ ಗಾಂಧಿ ಪಾದದ ಧೂಳಿಗೂ ಸಮನಾಗಿಲ್ಲ. ಅವರ ಸೇವೆಯಷ್ಟು ಸಿ. ಟಿ. ರವಿಗೆ ವಯಸ್ಸಾಗಿಲ್ಲ. ಜನರು ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ಸ್ವತಃ ವಾಜಪೇಯಿ ಅವರು ಇತಿ - ಮಿತಿಯಲ್ಲಿ ಹುಕ್ಕಾ ಬಾರ್ ತಗೊತಿದ್ದೆ ಎಂದು ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಸಿಟಿ ರವಿ ಹೇಳಿಕೆಗಳು ಹೊಲಿಕೆ ಮಾಡುವಂತಹದ್ದಲ್ಲ ಎಂದರು.
ಹೊಸ ಪದಾಧಿಕಾರಿಗಳ ನೇಮಕ
ಪಕ್ಷದಲ್ಲಿ ಹಿಂದೆ ಇದ್ದ ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಹೊಸ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ. 15 ದಿನಗಳಲ್ಲಿ ಹೊಸ ಪದಾಧಿಕಾರಿಗಳ ನೇಮಕ ನಡೆಯುತ್ತದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಸೋನಿಯಾ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಯಾರಲ್ಲಾದರೂ ಅಸಮಾಧಾನವಿದ್ದರೆ, ಮಾತನಾಡಿ ಬಗೆಹರಿಸುತ್ತೇವೆ ಎಂದರು.
ಆ.17ಕ್ಕೆ ಹಿರಿಯ ಮುಖಂಡರ ಸಭೆ
ಆ.17 ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಿರಿಯ ಮುಖಂಡರು ರಾಯಚೂರಿಗೆ ಆಗಮಿಸಲಿದ್ದಾರೆ. ರಾಜ್ಯದ ಹಿರಿಯ ಮುಖಂಡರ ಸಭೆ ನಡೆಸಲಾಗುತ್ತದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಶಾಸಕರು ಈ ಭಾಗದ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮುಂಬರುವ ತಾ.ಪಂ, ಜಿ.ಪಂ ಚುನಾವಣೆ ಬರುತ್ತಿರುವ ಹಿನ್ನೆಲೆ ಸಿದ್ಧತೆಗಳು ನಡೆಯಬೇಕಿದೆ ಎಂದರು.
ಸರ್ಕಾರ ಬಹಳ ದಿನ ಉಳಿಯಲ್ಲ
ರಾಜ್ಯದಲ್ಲಿರುವುದು ಸ್ಥಿರ ಸರ್ಕಾರವಲ್ಲ, ಅಸ್ಥಿರವಾದ ಸರ್ಕಾರ. ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ, ಮಧ್ಯಂತರ ಚುನಾವಣೆ ಎದುರಾಗಲಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. 40 ಸಾವಿರ ಖಾಲಿ ಹುದ್ದೆ ಭರ್ತಿಯಾಗದೆ ಹಾಗೇ ಉಳಿದಿವೆ. ಯುವಕರು ಉದ್ಯೋಗವಿಲ್ಲದೇ ಭ್ರಮನಿರಸನಗೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಮಿತಿ ರಚಿಸಿ ಸಭೆ ನಡೆಸಬೇಕಾಗಿತ್ತು. ಆದರೆ, ಸಮಿತಿಯನ್ನೇ ರಚನೆ ಮಾಡಲು ಸಾಧ್ಯವಾಗಿಲ್ಲ.
ರಾಜ್ಯ ಹಾಗೂ ಕೇಂದ್ರದಲ್ಲಿನ ಬಿಜೆಪಿ ದುರಾಡಳಿತದ ವಿರುದ್ದ ಧ್ವನಿ ಎತ್ತಬೇಕಿದೆ. ಸರ್ಕಾರಗಳು ರೈತರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಕೊರೊನಾ ಸಾವಿನ ಸಂಖ್ಯೆ ಸುಳ್ಳು ಮಾಹಿತಿ ಕೊಟ್ಟು ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಕನಿಷ್ಠ 3 ಲಕ್ಷ ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾ ಲಾಕ್ ಡೌನ್‌ನಿಂದ ಕಷ್ಟಕ್ಕೊಳಗಾದವರಿಗೆ ಹೋರಾಟ ಮಾಡಿ ನ್ಯಾಯ ದೊರೆಕಿಸಿಕೊಡಬೇಕಿದೆ ಎಂದರು.