ರಾಯಚೂರು: ಶ್ರೀಮಠದಲ್ಲಿ ರಾಯರ 401ನೇ ಪಟ್ಟಾಭಿಷೇಕ ಹಾಗೂ 427ನೇ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ನಟ ಸುದೀಪ್ ಅವರಿಗೆ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನಿಂದ ಸಂಜೆ ವೇಳೆ ಮಂತ್ರಾಲಯಕ್ಕೆ ಆಗಮಿಸಿದ ಸುದೀಪ್ ಮಠಕ್ಕೆ ಭೇಟಿ ನೀಡಿದರು. ಆರಂಭದಲ್ಲಿ ರಾಯರ ಮೂಲ ಬೃಂದಾವನ ದರ್ಶನ ಪಡೆದುಕೊಂಡು ನಂತರ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿದರು. ನಂತರ ಶ್ರೀಗಳು ನಟನಿಗೆ ಮಠದಿಂದ ಸನ್ಮಾನಿಸಿದರು.
ಸುದೀಪ್ ಬರುವ ವಿಚಾರ ತಿಳಿಯುತ್ತಿದಂತೆ ಸುದೀಪ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ನಿಗದಿಯಂತೆ ಮಠದ ಮುಂಭಾಗದ ಯೋಗಿಂದ್ರ ಸಭಾ ಭವನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸುದೀಪ್ ಸೇರಿದಂತೆ ಹಲವರಿಗೆ ಸನ್ಮಾನಿಸಿ, ಪ್ರಶಸ್ತಿ ನೀಡಬೇಕಾಗಿತ್ತು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ಅಲ್ಲಿ ಸನ್ಮಾನಿಸಲು ಸಾಧ್ಯವಾಗಲಿಲ್ಲ. ಇದರಿಂದ ಅಭಿಮಾನಿಗಳು ನಿರಾಸೆಗೊಂಡರು.