ಲಿಂಗಸುಗೂರು (ರಾಯಚೂರು): ಜೆಸ್ಕಾಂ ಉಪ ವಿಭಾಗದಲ್ಲಿ ಐಪಿಡಿಎಸ್ ಯೋಜನೆ ಸದ್ಬಳಕೆ ಮಾಡಿಕೊಳ್ಳುವಲ್ಲಿ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ.
ಈ ಯೋಜನೆಯಡಿಯಲ್ಲಿ ಪಟ್ಟಣ ಪ್ರದೇಶಗಳ ಹಳೆಯ ವಿದ್ಯುತ್ ಕಂಬ, ವೈಯರ್ ಲೈನ್, ಟಿಸಿ ಇತರೆ ಪರಿಕರಗಳನ್ನು ಬಲವರ್ಧನೆಗೊಳಿಸಿಕೊಳ್ಳಲು 2017ರಲ್ಲಿ 14 ಕೋಟಿ ಹಣ ನೀಡಲಾಗಿತ್ತು. ದೆಹಲಿ ಮೂಲದ ಗುತ್ತಿಗೆದಾರ ಉಪ ಗುತ್ತಿಗೆ ನೀಡಿ ನಿಯಮ ಉಲ್ಲಂಘಿಸಿದ್ದಾನೆ. ಸಿಂಗಲ್ ಲೈನ್ ಡ್ರಾಯಿಂಗ್ ಆಧರಿಸಿ ಈಗಾಗಲೇ ಮೆಟಿರಿಯಲ್ ಪೂರೈಸಿದ್ದಾಗಿ ಶೇ. 60ರಷ್ಟು ಹಣವನ್ನು ಗುತ್ತಿಗೆದಾರ ಪಾವತಿಸಿಕೊಂಡಿದ್ದಾನೆ.
ಗುತ್ತಿಗೆದಾರ ಪೂರೈಸಿದ ಪರಿಕರಗಳು ಕೂಡ ಖಾಸಗಿ ಹಾಗೂ ಪ್ರತಿಷ್ಠಿತರ ಹೊಸ ಬಡಾವಣೆಗಳಿಗೆ ಬಳಕೆ ಮಾಡಿ ಕೇಂದ್ರ ಸರ್ಕಾರದ ಯೋಜನೆಗೆ ಎಳ್ಳುನೀರು ಬಿಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಲಿಂಗಸುಗೂರು, ಹಟ್ಟಿ, ಮುದಗಲ್ಲ ಪಟ್ಟಣಗಳಲ್ಲಿ ಯೋಜನೆ ನಿಯಮಾನುಸಾರ ಕಾಮಗಾರಿ ಇನ್ನೂ ಅನುಷ್ಠಾನಗೊಂಡಿಲ್ಲ.
ಇನ್ನೂ ಶೇ. 40ರಷ್ಟು ಕಾಮಗಾರಿ ಪೂರ್ಣವಾಗದೆ ಇರುವಾಗಲೇ ಶಾರ್ಟ್ ಕ್ಲೋಸ್ ಹೆಸರಲ್ಲಿ ಅಂತಿಮ ಬಿಲ್ ಪಾವತಿ ಮಾಡುತ್ತಿದ್ದು, ಕೂಡಲೇ ಬಿಲ್ ತಡೆದು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಮಾಜ ಸೇವಕ ಅಕ್ರಮ್ ಪಾಷ ಒತ್ತಾಯಿಸಿದ್ದಾರೆ.
ಈ ಕುರಿತು ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳ ಅವರನ್ನು ಸಂಪರ್ಕಿಸಿದಾಗ, ಕಾಮಗಾರಿಗಳು ಪೂರ್ಣ ಅನುಷ್ಠಾನಗೊಂಡಿಲ್ಲ ಎಂಬುದು ನಿಜ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಶಾರ್ಟ್ ಕ್ಲೋಸ್ ನಿಯಮದಡಿ ಇರುವ ಸ್ಥಿತಿಯಲ್ಲಿ ಯೋಜನೆ ಅನುಷ್ಠಾನ ಸ್ಥಗಿತಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.