ರಾಯಚೂರು: ಹಳೆ ಮೈಸೂರು ಭಾಗದಲ್ಲಿ ಹೋದ ಕಡೆಯೆಲ್ಲ ಕಾಂಗ್ರೆಸ್ನವರು ತಮ್ಮ ಪ್ರಜಾಧ್ವನಿ ಯಾತ್ರೆಯಲ್ಲಿ ಹೆಚ್ಚು ಮಾತನಾಡಿದ್ದೆ ಜೆಡಿಎಸ್ ಬಗ್ಗೆ. ಹಾಗಾಗಿ ಕಾಂಗ್ರೆಸ್ನಿಂದ ನಡೆಯುತ್ತಿರುವುದು ಪ್ರಜಾಧ್ವನಿ ಯಾತ್ರೆ ಅಲ್ಲ ಅದು ಜನತಾಧ್ವನಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು, ರಾಯಚೂರು ತಾಲೂಕಿನಿಂದ ಮುಟ್ಟಿಮಲ್ಕಾಪುರನಿಂದ ಯಾತ್ರೆ ಆರಂಭದ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಕ್ಷದ ಕಾರ್ಯಕರ್ತರ ಜೊತೆಗೆ ಸೇರಿ ನಾನು ಯಾತ್ರೆ ಮಾಡುತ್ತೇನೆ. ಕಾಂಗ್ರೆಸ್ನವರು ದಂಡು ದಂಡಾಗಿ ಹೋಗಿ ತುಮಕೂರು, ಕೋಲಾರ, ದೊಡ್ಡಬಳ್ಳಾಪುರ, ಮೈಸೂರು, ಮಂಡ್ಯ ಯಾತ್ರೆ ಮಾಡುತ್ತಿದ್ದಾರೆ. ಆದರೆ ಹೋದಲ್ಲೆಲ್ಲ ಅವರು ಹೆಚ್ವಿಗೆ ಮಾತನಾಡಿದೇ ಜನತಾದಳದ ಬಗ್ಗೆ. ಬಿಜೆಪಿ, ಕಾಂಗ್ರೆಸ್ ನಾಯಕರು ಎಲ್ಲರೂ ಕುಮಾರಸ್ವಾಮಿ ಭಜನೆ ಮಾಡವವರೇ. ಅದು ಪ್ರಜಾಧ್ವನಿಗಿಂತ ಹೆಚ್ಚಾಗಿ, ಪ್ರಜೆಗಳ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದ ಕಾಂಗ್ರೆಸ್ನವರು ಅದನ್ನು ಬಿಟ್ಟು, ಕುಮಾರಸ್ವಾಮಿ ಭಜನೆ ಮಾಡಿರುವುದೇ ಧ್ವನಿಯಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಈ ರೀತಿ ಕುಮಾರಸ್ವಾಮಿ ಬಗ್ಗೆ ಮಾತನಾಡಿ ಜನರನ್ನ ಗೊಂದಲಕ್ಕೀಡು ಮಾಡಬಹುದು ಅಂದು ಕೊಂಡಿರಬಹುದು. ಒಂದು ಮಾತು ಹೇಳುತ್ತೇನೆ. ಜನತಾದಳ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಸೀಮಿತವಾಗಿರಲ್ಲ. ಕಾಂಗ್ರೆಸ್ನವರು ನಾಲ್ಕು ಅಥವಾ ಐದು ಜಿಲ್ಲೆಗೆ ಮಾತ್ರ ಜೆಡಿಎಸ್ ಶಕ್ತಿ ಎಂದು ಹೇಳುತ್ತಿದ್ದಾರೆ. ಈ ಚುನಾವಣೆ ಇಡೀ ರಾಜ್ಯದ ಉದ್ದಗಲಕ್ಕೂ ಜೆಡಿಎಸ್ ಶಕ್ತಿ ಏನು ಎನ್ನುವುದನ್ನು ತೋರಿಸಲಿದೆ. ಮೂರ್ನಾಲ್ಕು ಜಿಲ್ಲೆಯಲ್ಲಿ ಇದ್ದ ಶಕ್ತಿ ರಾಜ್ಯಾದ್ಯಂತ ಶಕ್ತಿ ವೃದ್ಧಿಯಾಗುತ್ತಿದೆ ಎಂದರು.
ನಾನು ಜನತಾದಳ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದೀನಾ?, ನಾನು ಜನತಾದಳವನ್ನು ನಾಳೆ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿಲ್ಲ, ಜನತಾದಳಕ್ಕೆ ಸಂಪೂರ್ಣ ಬಹುಮತ ಕೊಟ್ಟು ಈ ನಾಡಿನ ಜನತೆ, ನಾನು ಈ ನಾಡಿನ ಜನತೆಗೆ ಕೊಟ್ಟಂತ ಕಾರ್ಯಕ್ರಮಗಳು ಅನುಷ್ಠಾನಕ್ಕೆ ತರದೇ ಇದ್ದರೆ, ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದೇನೆ. ಐದು ವರ್ಷದ ಸಂಪೂರ್ಣ ಸರ್ಕಾರ ಜೆಡಿಎಸ್ಗೆ ಕೊಟ್ಟು, ನಾನು ಕೆಲಸದಲ್ಲಿ ವಿಫಲನಾದಾಗ ಮಾತ್ರ, ಡಿಕೆಶಿಗೆ ಕನ್ನಡ ಬರದಿದ್ರೆ ಇನ್ನೊಮ್ಮೆ ಅರ್ಥ ಮಾಡಿಕೊಳ್ಳಿ ಎಂದು ಕುಟುಕಿದರು.
ಚುನಾವಣಾ ಪೂರ್ವ ಸಮೀಕ್ಷೆಯ ಕುರಿತಂತೆ ಜೆಡಿಎಸ್ಗೆ ಈಗ 30, ಬಿಜೆಪಿ 60, ಕಾಂಗ್ರೆಸ್ 58 ಅಂತ ತೋರಿಸಿದ್ದಾರೆ, ಸದ್ಯ ಈಗ 30 ಆದರೂ ತೋರಿಸಿದ್ದಾರೆ. ಕಾಂಗ್ರೆಸ್ನವರು 20-22 ಎಂದವರೇ. ನಮ್ಮ ಮಹಾನ್ ಸುಳ್ಳು ರಾಮಯ್ಯ. ನನ್ನ ಸಮೀಕ್ಷೆ ಬೇರೆ ಇದೆ. ಆಗ ನಾನು ಪಕ್ಷ ವಿಸರ್ಜನೆ ಮಾಡಲು ಆಗುತ್ತಾ?, ಜನರಿಗೆ ಕೊಟ್ಟ ಮಾತು ಆಗ ನಾನು ಉಳಿಸಲು ಆಗಲ್ಲ, ನಾನು ಜನತೆಯ ಮಾತು ಉಳಿಸಿಕೊಳ್ಳಬೇಕು ಅಂದ್ರೆ, ನನಗೆ ಸ್ಪಷ್ಟ ಬಹುಮತ ಕೊಡಿ. ನಾನು ಸ್ವತಂತ್ರ ಸರ್ಕಾರ ಜನತೆಗೆ ಕೊಟ್ಟು, ಜನರ ಬದುಕು ಸರಿಪಡಿಸುವ ಶಕ್ತಿ ನನ್ನಲ್ಲಿ ಇದೆ. ನನ್ನ ಶಕ್ತಿಯನ್ನು ಬಳಕೆ ಮಾಡಿಕೊಳ್ಳಿ ಅಂತ ಜನತೆಗೆ ಹೇಳುತ್ತಿದ್ದೇನೆ ಎಂದರು.
ಈ ಚುನಾವಣೆಯಲ್ಲಿ ರಾಜ್ಯಾದ್ಯಂತ ಜೆಡಿಎಸ್ಗೆ ಬಹುಮತ ಬರುತ್ತೆ. ಡಿಕೆಶಿ ಮತ್ತು ಸುಳ್ಳಿನ ರಾಮಯ್ಯಗೆ ಹೇಳುತ್ತೇನೆ, ಜೆಡಿಎಸ್ ಬರೀ ಕರ್ನಾಟಕಕ್ಕೆ ಸೀಮಿತವಾಗಲ್ಲ. ಜೆಡಿಎಸ್ ಎಂಬುವುದು ಇಡೀ ದೇಶದಲ್ಲಿ ಬೆಳಗುತ್ತದೆ. ಜೆಡಿಎಸ್ ಪಕ್ಷದ ಕಡೆಗೆ ದೇಶದ ಜನರು ತಿರುಗಿ ನೋಡುತ್ತಾರೆ. ಆ ರೀತಿಯ ಸವಾಲ್ ಸ್ವೀಕಾರ ಮಾಡಿ ಹೊರಟಿದ್ದೇನೆ. ಪಕ್ಷ ವಿಸರ್ಜನೆ ಮಾಡಲು ನಾನು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಮಹಾನುಭಾವರೇ.. ಇಡೀ ದೇಶದಲ್ಲಿ ಹೋಗಿಬಿಟ್ಟಿದ್ದೀರಿ, ಕರ್ನಾಟಕದಲ್ಲಿ 50, 60, 70 ಸೀಟ್ಗಳು ಗೆದ್ದಿದ್ದೀರಿ. ಅದು ಕೂಡ ಕಳೆದುಕೊಳ್ಳುತ್ತೀರಿ ಎಚ್ಚರಿಕೆ ಎಂದರು.
ನನ್ನ ಮುಗಿಸಲು ಹೋಗಿ ಜನತಾದಳದ ಬಗ್ಗೆ ಹಗುರವಾಗಿ ಮಾತನಾಡಿ, ಇರುವ ಸೀಟ್ಗಳನ್ನೂ ಮುಂದಿನ ಚುನಾವಣೆಯಲ್ಲಿ ಕಳೆದುಕೊಳ್ಳುತ್ತೀರಿ. ನನಗೆ ಗೊತ್ತಿದೆ ಈ ರಾಜ್ಯದ ಜನರ ನಾಡಿಮೀಡಿತ ಏನಿದೆ ಎಂದು, ಪದೇ ಪದೇ ನಮ್ಮನ್ನು ಏಕೆ ಕೆಣಕುತ್ತೀರಿ, ಅದೂ ಏನೋ ಹೇಳುತ್ತೀರಲ್ಲ, 200 ಯೂನಿಟ್ ಉಚಿತ.. 2000 ಖಚಿತ, ಅದನ್ನು ಭಜನೆ ಮಾಡಿಕೊಂಡು ಹೋಗಿ, ಕುಮಾರಸ್ವಾಮಿ ಬಗ್ಗೆ ಟೀಕೆ ಮಾಡಿದಷ್ಟು ಬರುವ ಸೀಟ್ ಬರಲ್ಲ, ಉಚಿತ, ಖಚಿತ ಹೇಳಿದ್ರೆ ಆಗ ನಾಲ್ಕು ಸೀಟ್ ಹೆಚ್ಚಿಗೆ ಗೆಲ್ಲಬಹುದು. ನನ್ನ ಭಜನೆ ಮಾಡದಿದ್ರೆ ತಿಂದ ಅನ್ನ ನಿಮಗೆ ಅರಗಲ್ವೇ, ನಾನು 123 ಸ್ಥಾನ ಗುರಿ ಇಟ್ಟುಕೊಂಡು ಹೊರಟ್ಟಿದ್ದೇನೆ, ಆ ಗುರಿ ಮುಟ್ಟುವ ಸಂಪೂರ್ಣ ವಿಶ್ವಾಸ ನನಗೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ನಿಮ್ಮ ಪಾರ್ಟಿ ಅವರನ್ನ ನೀವು ಕಂಟ್ರೋಲ್ ಮಾಡಿಕೊಳ್ಳಿ: ಸಿದ್ದರಾಮಯ್ಯಗೆ ಹೆಚ್ಡಿಕೆ ಟಾಂಗ್