ಹಾವೇರಿ : ಅಡ್ಜಸ್ಟ್ಮೆಂಟ್ ಇರಲಾರದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಲಾಗಿದೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಜಿಲ್ಲೆ ಶಿಗ್ಗಾಂವಿ ತಾಲೂಕು ಹಿರೇಬೆಂಡಿಗೇರಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರದಲ್ಲಿ ನನ್ನ ಮೇಲೂ ಕೇಸ್ ಹಾಕಿದ್ದಾರೆ. ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ, ಸಿ.ಟಿ ರವಿ, ಬೊಮ್ಮಾಯಿ ಮೇಲೂ ಕೇಸ್ ಹಾಕಿದ್ದಾರೆ ಎಂದು ತಿಳಿಸಿದರು.
ಡಿಸಿಎಂ ಡಿಕೆಶಿ ಭಿಕ್ಷೆಯಿಂದ ಶಾಸಕ ಆದವರ ಮೇಲೆ ಒಂದೂ ಕೇಸ್ ಮಾಡಿಲ್ಲ. ಪೊಲೀಸರು ಅದನ್ನು ಮಾಡುತ್ತಿದ್ದಾರೆ.
5 ಲಕ್ಷ ಪರಿಹಾರದ ಸಂಬಂಧ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ ಸಚಿವ ಶಿವಾನಂದ ಪಾಟೀಲ್ ಇರುವ ಸರ್ಕಾರ ಇದು. ರೈತರು ಎರಡು ವರುಷ ಬರಗಾಲ ಬರಲಿ ಅಂತ ಬೇಡ್ಕೋತಾರೆ ಅಂತ ಹೇಳಿದ್ದ ಶಿವಾನಂದ ಪಾಟೀಲ್ ಇರುವ ಸರ್ಕಾರ ಇದು. ಅದಕ್ಕೆ ಶಿವಾನಂದ ಪಾಟೀಲ್ಗೆ 5 ಕೋಟಿ ಕೊಡ್ತೀನಿ ಆತ್ಮಹತ್ಯೆ ಮಾಡಿಕೋ ಅಂದಿದ್ದೆ ಎಂದು ಯತ್ನಾಳ್ ತಿಳಿಸಿದರು.
ಹಣಕ್ಕಾಗಿ ರೈತರು ಏನು ಬೇಕಾದರೂ ಮಾಡ್ತಾರೆ ಅನ್ನೋ ಭಾವನೆ ಈ ಸರ್ಕಾರಕ್ಕೆ ಇದೆ ಎಂದು ಆರೋಪಿಸಿದರು. ಆದಿಲ್ ಶಾಹಿ, ನವಾಬರು ಇದ್ದ ಕಡೆ ಬಹುತೇಕ ಇದೇ ವಕ್ಫ್ ಸಮಸ್ಯೆ ಆಗಿದೆ. ಬೀದರ್ನಲ್ಲಿ ನಿಜಾಮ್ ಇದ್ದಾಗ ಏ ಸಬ್ ತುಮಾರಾ ಅಂತ ಹೇಳಿದ್ನಂತೆ, ಅದಕ್ಕೆ ಜಾಗ ಕೇಳ್ತಿದಾರೆ. ಅವರಿಗೆ ಕೋರ್ಟ್ ಇಲ್ಲ, ಡಿಸಿ, ಎಸಿ, ಸಿವಿಲ್ ಯಾವ ಕೋರ್ಟ್ ಇಲ್ಲ. ಅವರದೇ ಟ್ರಿಬ್ಯುನಲ್ ಇದೆ ಎಂದರು.
ಕಾಗಿನೆಲೆ ಊರೇ ವಕ್ಫ್ ಮಾಡಿದ್ದಾರೆ: ಚನ್ನಕೇಶವ, ಸೋಮೇಶ್ವರ ದೇವಾಲಯ ಅವರದ್ದಾ? ಕಾಗಿನೆಲೆ ಊರೇ ವಕ್ಫ್ ಮಾಡಿದ್ದಾರೆ. ಕಡಕೋಳ ಮೂರು ದೇವಸ್ಥಾನ ವಕ್ಫ್ ಅಂತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು. ಸಣ್ಣ ಕಲ್ಲು ಇದ್ದರೂ ಸುಣ್ಣ ಹೊಡೆದು ಆ ಜಾಗಕ್ಕೆ ಚಾದರ ಹಾಕಿ ನಮ್ಮದು ಅಂತಾರೆ. ಬೊಮ್ಮಾಯಿ ಕಾಲದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಸಿಎಂ ಸಿದ್ದರಾಮಯ್ಯ ಅರೆಹುಚ್ಚ ಜಮೀರ್ಗೆ ಹೇಳಿದರು. ಅದಕ್ಕೆ ಜಿಲ್ಲೆಗಳಿಗೆ ಹೋಗಿ ಅಧಿಕಾರಿಗಳಿಗೆ ಜಮೀರ್ ಏಕ ವಚನದಲ್ಲಿ ಆರ್ಡರ್ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಎಂಪಿಗಳ ಮನೆ ಮುಂದೆ ಧರಣಿ ಮಾಡಿ : ಕೇಂದ್ರದ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಕಾನೂನಿಗೆ ವಿರೋಧ ಮಾಡಿದರೆ, ಓಡಾಡೋಕೆ ಬಿಡಲ್ಲ ಅಂತ ಕಾಂಗ್ರೆಸ್ ಎಂಪಿಗಳಿಗೆ ಹೇಳಿ ಎಂದು ಯತ್ನಾಳ್ ರೈತರಿಗೆ ತಿಳಿಸಿದರು. ಕಾಂಗ್ರೆಸ್ ಎಂಪಿಗಳ ಮನೆ ಮುಂದೆ ಧರಣಿ ಮಾಡಿ ಎಂದು ಯತ್ನಾಳ್ ಕರೆ ನೀಡಿದರು.
ಯತ್ನಾಳ್ ಕ್ಷಮೆ ಕೇಳಲಿ ಎಂಬ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಅವರು, ಪುಗಸಟ್ಟೆ ಕ್ಷಮೆ ಕೇಳೋಕೆ ನನಗೇನು? ಬೇಕಾದರೆ ಕೇಸ್ ಹಾಕಲಿ. 38 ಕೇಸ್ ಆಗುತ್ತವೆ. ಕೇಸ್ ಹಾಕು ಅಂತ ಹೇಳ್ರಿ ಎಂದು ಯತ್ನಾಳ್ ತಿಳಿಸಿದರು.
ಹಿಂದೂಗಳು ವೋಟ್ ಹಾಕಿಲ್ಲವಾ? : ಇಂಡಿ ತಾಲೂಕಿನಲ್ಲಿ ಒಂದು ಊರನ್ನೇ ವಕ್ಫ್ ಮಾಡಿದ್ದಾರೆ. ಈ ಬಗ್ಗೆ ಒಬ್ಬ ಶಾಸಕನೂ ಮಾತಾಡಿಲ್ಲ. ಇವರು ಮುಸ್ಲಿಂ ವೋಟ್ನಿಂದ ಮಾತ್ರ ಶಾಸಕ ಆಗಿದ್ದಾರಾ? ಹಿಂದೂಗಳು ವೋಟ್ ಹಾಕಿಲ್ಲವಾ? ಎಂದು ಪ್ರಶ್ನಿಸಿದರು.
ಒಂಬತ್ತುವರೆ ಲಕ್ಷ ಎಕರೆ ಅಂತ ಕ್ಲೇಮ್ ಮಾಡಿಕೊಳ್ತಿದ್ದಾರೆ. 2019 ರಲ್ಲಿ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದಾಗ 5 ಲಕ್ಷ 81 ಸಾವಿರ ಎಕರೆ ಅಂದಿದ್ರು, ಕರ್ನಾಟಕದೊಂದೇ ಇಷ್ಟು ಎಂದು ಯತ್ನಾಳ್ ಆತಂಕ ವ್ಯಕ್ತಪಡಿಸಿದರು.
ವಕ್ಫ್ ರದ್ದು ಮಾಡಿ ಅಂತ ಕೇಳುತ್ತೇವೆ : ಮಠಗಳನ್ನು ಕೂಡಾ ವಕ್ಫ್ ಅಂತ ಮಾಡಿದ್ದಾರೆ. ನಾವು ವಕ್ಫ್ ಕಾಯಿದೆ, ತಿದ್ದುಪಡಿ ಮಾಡೋದು ಗ್ಯಾರಂಟಿ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ಪಾಸ್ ಮಾಡಲಾಗುತ್ತೆ. ವಕ್ಫ್ ಅಂತ ಎಂದೂ ಹಾಕೋಕೆ ಬರದಂಗೆ ತಿದ್ದುಪಡಿ ಮಾಡ್ತೀವಿ. ವಕ್ಫ್ ರದ್ದು ಮಾಡಿ ಅಂತ ಕೇಳುತ್ತೇವೆ ಎಂದು ಯತ್ನಾಳ್ ತಿಳಿಸಿದರು.
ಇದನ್ನೂ ಓದಿ : ವಕ್ಫ್ ಜೆಪಿಸಿ ನಿಯೋಗಕ್ಕೆ ಅಹವಾಲುಗಳ ಸುರಿಮಳೆ ; ನಿಯೋಗದ ಮುಂದೆ ಅಳಲು ತೋಡಿಕೊಂಡ ರೈತರು