ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶ (ಹಿಂದಿನ ಹೈದ್ರಾಬಾದ್ ಕರ್ನಾಟಕ) ಸಮಗ್ರ ಅಭಿವೃದ್ಧಿ ಉದ್ದೇಶದಿಂದ ಜಾರಿಗೊಳಿಸಲಾದ 371ಜೆ ವಿಶೇಷ ಸ್ಥಾನಮಾನದ ಅಸಮರ್ಪಕ ಅನುಷ್ಠಾನದಿಂದ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಮುಂಬಡ್ತಿ ನೀಡುವಲ್ಲಿ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈಗಿನ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ವಿವಿಧ 24 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಜೇಷ್ಠತಾ ಆಧಾರದ ಮೇಲೆ ನೀಡಲಾಗುವ ಮುಂಬಡ್ತಿ ಸಮಯದಲ್ಲಿ 371ಜೆ ವಿಶೇಷ ಸ್ಥಾನಮಾನ ಅಸಮರ್ಪಕ ಅನುಷ್ಠಾನದಿಂದ ಹಿನ್ನಡೆಯಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ರಾಜ್ಯದಲ್ಲಿ ಹಿಂದುಳಿದ ಪ್ರದೇಶವಾಗಿದ್ದು, ಸಂವಿಧಾನ ಬದ್ದವಾಗಿ ಸಾಮಾಜಿಕ ನ್ಯಾಯ ಮತ್ತು ಈ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ 2013 ರಲ್ಲಿ 371ಜೆ ವಿಶೇಷ ಸ್ಥಾನಮಾನ ನೀಡಲಾಗಿದೆ.
ವಿಶೇಷ ಸ್ಥಾನಮಾನದನ್ವಯ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರಿಗೆ ಮುಂಬಡ್ತಿ ಸಮಯದಲ್ಲಿ ಅನ್ಯಾಯವಾಗುತ್ತಿದ್ದು, ಇತರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರಿಗೆ ನಾನ್ ಎಚ್-ಕೆ ಕೋಟಾದಡಿ ಶೇ 8 ರಷ್ಟು ಮೀಸಲಾತಿ ಅಸಮರ್ಪಕ ಅನುಷ್ಠಾನದಿಂದ ನೌಕರರಿಗೆ ಅನ್ಯಾಯವಾಗುತ್ತಿದೆ.
ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಲ್ಲಿ ಈ ಭಾಗದ ಸರ್ಕಾರಿ ನೌಕರರು ಜೇಷ್ಠತಾ ಪಟ್ಟಿಯನ್ವಯ 8-12 ವರ್ಷ ಹಿರಿಯರಾಗಿದ್ದರೂ ಮುಂಬಡ್ತಿ ಪಡೆಯಲು ಹಿನ್ನಡೆಯಾಗುತ್ತಿದೆ.
ಒಬ್ಬ ಸರ್ಕಾರಿ 371ಜೆ ಅನ್ವಯ ತಾನು ಎಚ್-ಕೆ ( ಸ್ಥಳೀಯ ವೃಂದ) ದಲ್ಲಿ ಇರಲು ಅಭಿಮತ ಪತ್ರ ನೀಡಬೇಕಿತ್ತು, ಈ ಕಲಂ ಅನ್ವಯ ಯಾರು ಅಭಿಮತ ಪತ್ರವನ್ನು ನೀಡುವುದಿಲ್ಲವೊ ಅಂಥವರನ್ನು ನೇರವಾಗಿ ಉಳಿಕೆ ಮೂಲದಲ್ಲಿ (ನಾನ್-ಎಚ್.ಕೆ) ಸೇರ್ಪಡೆ ಮಾಡುವಂತೆ ಕಾನೂನು ಇದ್ದು, ಆದರೆ ಈ ಭಾಗದ ಎಲ್ಲಾ ಇಲಾಖೆ ಮುಖ್ಯಸ್ಥರು ನೌಕರರ ಸೇವಾ ಪುಸ್ತಕ ನೋಡಿ ಅವರನ್ನು ಎಚ್.ಕೆ ಸ್ಥಳೀಯ ಮೂಲವೆಂದು ಪರಿಗಣಿಸದಿರುವುದು ಕಾನೂನು ಬಾಹಿರವಾಗಿದೆ. ಬೆಂಗಳೂರು ವಿಭಾಗ, ಮೈಸೂರು ವಿಭಾಗ, ಬೆಳಗಾವಿ ವಿಭಾಗಗಳಲ್ಲಿ ಈ ಭಾಗದ ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಅಹಿಂದ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಸೈಬಣ್ಣ ಜಮಾದಾರ ಮಾತನಾಡಿ, 371ಜೆ ವಿಶೇಷ ಸ್ಥಾನಮಾನ ಸಮರ್ಪಕ ಅನುಷ್ಠಾನ ಮಾಡುವಲ್ಲಿ ಅಧಿಕಾರಿ ವರ್ಗ ಅಸಮರ್ಪಕವಾಗಿದ್ದು, ಇದರಿಂದ ಸರ್ಕಾರಿ ನೌಕರರಿಗೆ ಜೇಷ್ಠತಾ ಆಧಾರದ ಮೇಲೆ ಮುಂಬಡ್ತಿ ನೀಡುವಲ್ಲಿ ಅನ್ಯಾಯವಾಗುತ್ತಿದೆ, ರಾಜ್ಯದ 24 ಜಿಲ್ಲೆಗಳಲ್ಲಿ ಈ ಭಾಗದ ನೌಕರರಿಗೆ ಶೇ 8 ಮುಂಬಡ್ತಿ ನೀಡಬೇಕು. ಅಭಿಮತ ಪತ್ರಗಳನ್ನು ಕೊಡದೆ ಇರುವರನ್ನು ಈ ಕೂಡಲೇ ಉಳಿಕೆಯ ಮೂಲಕ (ನಾನ್-ಎಚ್.ಕೆ) ಸೇರ್ಪಡೆ ಮಾಡಬೇಕು. 371 ಜೆ ಕಲಂ ನ ಮುಂಬಡ್ತಿ ನಿಯಮಗಳನ್ನು ಕಾನೂನು ತಿದ್ದುಪಡಿ ಮಾಡುವ ಮೂಲಕ ಸರ್ಕಾರಿ ನೌಕರರಿಗೆ ನ್ಯಾಯ ಒದಗಿಸಲು ಅಧಿವೇಶನದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.