ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ದೇವರಭೂಪುರದಲ್ಲಿ ಭಾನುವಾರ ವಾಂತಿ-ಭೇದಿಗೆ ಓರ್ವ ವೃದ್ಧ ಮೃತಪಟ್ಟಿದ್ದು ಜನರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಮಲ್ಲಪ್ಪ ಕಾಳಪ್ಪ ಗುರುಗುಂಟಿ (62) ಮೃತಪಟ್ಟ ಸುದ್ದಿ ಜನರಿಗೆ ಭಯ ಹುಟ್ಟಿಸಿದೆ. ಈತನ ಸಾವಿನ ಬೆನ್ನಲ್ಲೇ ವಾಂತಿ-ಭೇದಿಯ ಮತ್ತಷ್ಟು ಪ್ರಕರಣಗಳು ಕಾಣಿಸಿಕೊಂಡಿವೆ. ಸದ್ಯ 15 ಪುಟ್ಟ ಮಕ್ಕಳು, 40ಕ್ಕೂ ಹೆಚ್ಚು ವಯಸ್ಕರರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರ ನಿರ್ಲಕ್ಷ್ಯ, ಸಿಬ್ಬಂದಿಯ ತತ್ಸಾರ ಮನೋಭಾವದಿಂದ ವೃದ್ಧ ಮಲ್ಲಪ್ಪ ಮೃತಪಟ್ಟಿದ್ದು, ಗುಣಮಟ್ಟದ ಚಿಕಿತ್ಸೆ ದೊರಕುತ್ತಿಲ್ಲ. ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ತೆರೆದುಕೊಂಡಿದ್ದಾರೆ. ಇಲ್ಲಿ ಪೂರ್ಣ ಸಮಯ ಇರುವುದಿಲ್ಲ. ವೈದ್ಯರು ತಪಾಸಣೆಗೆ ಬರದೆ ಸಿಬ್ಬಂದಿ ಮೇಲೆ ಬಿಟ್ಟಿದ್ದಾರೆ. ಸಿಬ್ಬಂದಿ ಸರಿಯಾಗಿ ಔಷಧಿ ಕೂಡ ನೀಡುತ್ತಿಲ್ಲ. ಪ್ರಶ್ನಿಸಿದರೆ ಬೇರೆ ಆಸ್ಪತ್ರೆಗೆ ಕಳುಹಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.