ರಾಯಚೂರು : ಜಿಲ್ಲೆಯಲ್ಲಿ ಕೃಷ್ಣ- ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ ಇದಕ್ಕೆ ಜಿಲ್ಲಾಡಳಿತ ಹಾಗೂ ಗಣಿ ಹಾಗೂ ಭೂ ವಿಜ್ಞಾನ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಗಳು ವೈಫಲ್ಯವಾಗಿದೆ ಎಂದು ಜನಸಂಗ್ರಾಮ ಪರಿಷತ್ ದೂರಿದೆ.
ಈ ಕುರಿತು ಪರಿಷತ್ತಿನ ಮುಖಂಡ ರಾಘವೇಂದ್ರ ಕುಷ್ಟಗಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಯಚೂರು ತಾಲೂಕಿನ ಕಾಡ್ಲೂರು, ಅರಷಣಗಿ, ಸರ್ಜಾಪುರ, ಕರೇಕಲ್ಲು ,ಗುಂಜಳ್ಳಿ, ಹಾಗೂ ದೇವದುರ್ಗ, ಮಾನವಿ, ಸಿಂಧನೂರು ಸೇರಿ ಜಿಲ್ಲೆಯ ತುಂಗಭದ್ರಾ ,ಕೃಷ್ಣ ನದಿ ತೀರದಲ್ಲಿ ಎಗ್ಗಿಲ್ಲದೇ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ದೂರಿದ್ದಾರೆ.
ಅಕ್ರಮ ಮರಳು ಸಾಗಣೆ ಮಾಡುವ ವಿರುದ್ದ ಧ್ವನಿ ಎತ್ತುವ ಸಾಮಾಜಿಕ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆ ಬೆದರಿಕೆ ಹಾಕುತ್ತಿದ್ದು ಖಂಡನೀಯ. ಅಕ್ರಮ ಮರಳು ದಂಧೆಯಲ್ಲಿ ಕಿಂಗ್ ಪಿನ್ಗಳಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳಾದ ವಿಶ್ವನಾಥ್ ಹಾಗೂ ಭಾಸ್ಕರ್ ಅವರು ಸಾಥ್ ನೀಡುತ್ತಿದ್ದಾರೆ. ಜೊತೆಗೆ ರಾಜಕೀಯ ನಾಯಕರ ಕುಮ್ಮಕ್ಕು ಇದ್ದು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೆಲ್ಲ ಅಕ್ರಮಗಳ ಬಗ್ಗೆ ತಡೆಯಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲೀಸ್ ಇಲಾಖೆ ವಿಫಲವಾಗಿದ್ದು ಕೂಡಲೇ ಜಾಗೃತರಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ತರಬೇಕು ಇಲ್ಲದೇ ಹೋದಲ್ಲಿ ತೀವ್ರ ತರದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.