ರಾಯಚೂರು: ಇತಿಹಾಸ ಪ್ರಸಿದ್ದ ರಾಯಚೂರು ಜಿಲ್ಲೆಯ ಮಲ್ಲಿಕಾರ್ಜುನ ಬೆಟ್ಟದ ನಿಷೇಧಿತ ಪ್ರದೇಶದಲ್ಲಿ ಅಕ್ರಮ ರಸ್ತೆ ನಿರ್ಮಾಣ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ಮಸ್ಕಿ ಪಟ್ಟಣದ ಅಶೋಕ ಶಿಲಾಶಾಸನವಿರುವ ಶಾಸನದ ಪಕ್ಕದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಒಂದು ಕಿಲೋಮೀಟರ್‌ವರೆಗೆ ರಸ್ತೆ ನಿರ್ಮಾಣ ಮಾಡುವ ಮೂಲಕ ವಿಶ್ವವಿಖ್ಯಾತಿಯ ಬೆಟ್ಟಕ್ಕೆ ದುಷ್ಕರ್ಮಿಗಳು ಕನ್ನ ಹಾಕುವ ಯತ್ನ ನಡೆಸಿದ್ದಾರೆ. ಇಲ್ಲಿ ಅಶೋಕ ಚಕ್ರವರ್ತಿ ದೇವನಂ ಪ್ರಿಯ ಎನ್ನುವ ಅಶೋಕ ಶಾಸನವಿದ್ದು, ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಬರುವ ಬೆಟ್ಟದಲ್ಲಿ ಯಾವುದೇ ಚಟುವಟಿಕೆ ನಡೆಸುವುದಕ್ಕೆ ಅವಕಾಶವಿಲ್ಲ. ಒಂದು ವೇಳೆ ಯಾವುದೇ ಚಟುವಟಿಕೆ ನಡೆಸಿದ್ರೆ ಕಾನೂನು ಬಾಹಿರವಾಗುತ್ತದೆ.
ಈ ಕುರಿತಂತೆ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ, ರಸ್ತೆ ನಿರ್ಮಾಣಕ್ಕೆ ಬಳಸುತ್ತಿದ್ದ ಹಿಟಾಚಿ ಹಾಗೂ ಅದರ ಡ್ರೈವರ್‌ನ ವಶಕ್ಕೆ ಪಡೆದು ಪೊಲೀಸ್‌ರಿಗೆ ಒಪ್ಪಿಸಿದ್ದಾರೆ. ಈ ಕುರಿತಂತೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇತಿಹಾಸ ಪ್ರಸಿದ್ಧಿ ಹೊಂದಿರುವ ಇಂತಹ ಸ್ಥಳದಲ್ಲಿ 1 ಕಿ.ಮೀವರೆಗೂ ರಸ್ತೆ ನಿರ್ಮಾಣ ಮಾಡುತ್ತಿರುವುದು ಎಂದರೆ ಭದ್ರತೆಯ ಕೊರತೆ ಮೇಲ್ನೂಟಕ್ಕೆ ಕಂಡು ಬಂದಿದ್ದು, ಸೂಕ್ತ ಭದ್ರತೆ ವಹಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.