ರಾಯಚೂರು : ನಗರದ ಸಿಯಾತಲಾಬ್ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳ ತೆರವಿಗೆ ಹೈಕೋರ್ಟ್ ಸೂಚನೆ ನೀಡಿದ್ದು, ಇಂದು ಮರು ಸಮೀಕ್ಷೆ ನಡೆಸಲಾಯಿತು.
ಸಹಾಯಕ ಆಯುಕ್ತ ಸಂತೋಷ, ತಹಶೀಲ್ದಾರ್ ಹಂಪಣ್ಣ ನೇತೃತ್ವದಲ್ಲಿ ಮರು ಸಮೀಕ್ಷೆ ನಡೆಸಲಾಯಿತು. ಸಿಯಾತಲಾಬ್ ಸ್ಲಂನಲ್ಲಿರುವ ಸರ್ವೆ ನಂ. 33/1ರಲ್ಲಿರುವ 39 ಎಕರೆ 2 ಗುಂಟೆ ವಿಸ್ತೀರ್ಣದಲ್ಲಿ ಅನಧಿಕೃತವಾಗಿ ಚಿತ್ರಮಂದಿರ, ಖಾಸಗಿ ಕಟ್ಟಡಗಳನ್ನ ನಿರ್ಮಾಣ ಮಾಡಿದ ಕುರಿತು ಸಲ್ಲಿಕೆಯಾಗಿದ್ದ ದೂರಿನ ಮೇರೆಗೆ ಹಿಂದಿನ ಜಿಲ್ಲಾಧಿಕಾರಿಗಳು ಕಟ್ಟಡ ತೆರವುಗೊಳಿಸುವಂತೆ ಆದೇಶ ನೀಡಿದ್ದರು.
ನಿರ್ಮಾಣವಾದ ಕಟ್ಟಡಗಳಲ್ಲಿ ಒಂದು ಕಟ್ಟಡ ಮಾತ್ರ ತೆರವಿಗೆ ಆದೇಶ ನೀಡಿದ್ದರು. ಇದನ್ನ ಪ್ರಶ್ನಿಸಿ ಮಾಲೀಕರು ಸಲ್ಲಿಸಿದ ಅರ್ಜಿಯ ಪರಿಶೀಲನೆ ನಡೆಸಿದ ಹೈಕೋರ್ಟ್ ಸಿಯಾತಲಾಬ್ನಲ್ಲಿರುವ ಸ್ಥಳದ ಮರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ನಿರ್ದೇಶನದ ಮೇರೆಗೆ ಇಂದು ಸಮೀಕ್ಷೆಯನ್ನು ನಡೆಸಲಾಯಿತು. ಸರ್ವೇ ನಡೆಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.