ರಾಯಚೂರು: ಜನರು ಬದಲಾವಣೆ ಬಯಸಿ ಫಲಿತಾಂಶ ನೀಡಿದ್ದು, ಈ ಸೋಲಿನ ಜವಾಬ್ದಾರಿ ನಾನೇ ಹೊರುವೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ತಿಳಿಸಿದ್ದಾರೆ.
ಅವರಿಂದು ಮತ ಎಣಿಕೆ ಕೇಂದ್ರದಲ್ಲಿ ಉಪಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಳೆದ ಮೂರು ಸಲ ಶಾಸಕನಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದಿನ ಎರಡು ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇರಲಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡುವೆ. ಚುನಾವಣೆ ಫಲಿತಾಂಶ ಗಮನಿಸಿದರೆ ನಮ್ಮವರೇ ನಮ್ಮನ್ನು ಕೈ ಹಿಡಿಯಲಿಲ್ಲ ಎನ್ನುವುದು ಗೊತ್ತಾಗುತ್ತಿದ್ದು, ನಿರೀಕ್ಷಿತ ಗ್ರಾಮಗಳಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿದೆ ಎಂದರು.
ಕ್ಷೇತ್ರದ ಜನತೆಗೆ ಅಭಿವೃದ್ಧಿ ಬೇಕಾಗಿಲ್ಲ, ಜನರು ಬದಲಾವಣೆ ಬಯಸಿ ಹೊಸಬರಿಗೆ ಅವಕಾಶ ನೀಡಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಈ ಫಲಿತಾಂಶ ಕುರಿತು ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವೆ ಎಂದರು.
ಓದಿ: ನೀನೇ 'ಭಗವಂತ'ನೆಂದು ಕಾಲಿಗೆರಗಿ 'ಶರಣು' ಎಂದ ಸಲಗಾರ.. ಶಿಕ್ಷಕನೊಬ್ಬ ಬಸವಕಲ್ಯಾಣಕ್ಕೆ ಶಾಸಕನಾದ..