ರಾಯಚೂರು : ರಾಜ್ಯ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸದ್ಯಕ್ಕೆ ನಾಮಪತ್ರ ಸಲ್ಲಿಕೆ ಕಾರ್ಯ ಬಿರುಸುಗೊಂಡಿದೆ. ಇದೀಗ ರಾಯಚೂರು ಜಿಲ್ಲೆಯಲ್ಲಿ ಒಂದೇ ಕ್ಷೇತ್ರಕ್ಕೆ ಗಂಡ ಹೆಂಡತಿ ಇಬ್ಬರೂ ನಾಮಪತ್ರ ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜನಾರ್ದನ್ ರೆಡ್ಡಿಯವರ ಕೆಆರ್ಪಿಪಿ ಅಭ್ಯರ್ಥಿಯಾಗಿ ಪತಿ ನಾಮಪತ್ರ ಸಲ್ಲಿಸಿದ್ರೆ, ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಉಮೇದುವರಿಕೆ ಸಲ್ಲಿಸಿದ್ದಾರೆ.
ಹೌದು, ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಪತಿ, ಪತ್ನಿ ಇಬ್ಬರು ನಾಮಪತ್ರ ಸಲ್ಲಿಸುವ ಮೂಲಕ ಒಬ್ಬರಿಗೊಬ್ಬರು ಎದುರಾಳಿಗಳಾಗಲಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಪತಿ ಮಲ್ಲಿಕಾರ್ಜುನ ನೆಕ್ಕಂಟಿ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಮತ್ತೊಂದು ಕಡೆ, ಪತ್ನಿ ಎನ್. ರಮ್ಯಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗೆ ನಾಮಿನೇಷನ್ ಸಲ್ಲಿಸಿದ್ದಾರೆ. ಈ ಮೂಲಕ ಸತಿ - ಪತಿ ಇಬ್ಬರು ಪರಸ್ಪರಗೆ ಸ್ಪರ್ಧೆಗೆ ಇಳಿದಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮುನ್ನ ಮಲ್ಲಿಕಾರ್ಜುನ ನೆಕ್ಕಂಟಿ ಪಟ್ಟಣದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಮ್ಮ ಉಮೇದುವರಿಕೆಯನ್ನು ಸಲ್ಲಿಸಿದರು. ವಿಶೇಷ ಅಂದ್ರೆ, ಪತಿಯ ವಾಹನದಲ್ಲೇ ಬಂದಂತಹ ಪತ್ನಿ ಎನ್.ರಮ್ಯಾ ಗಂಡನೊಂದಿಗೆ ನಾಮಪತ್ರವನ್ನು ಸಲ್ಲಿಸಲು ತೆರಳಲಿಲ್ಲ. ಬದಲಾಗಿ, ಪತಿ ನಾಮಪತ್ರ ಸಲ್ಲಿಸಿದ ನಂತರ ಅವರು ಪ್ರತೇಕ್ಯವಾಗಿ ತೆರಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಇದನ್ನೂ ಓದಿ : ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಸೊರಬ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚಿದಾನಂದಗೌಡ
ಗಂಡ ಹೆಂಡತಿ ಇಬ್ಬರೂ ಯಾಕಾಗಿ ಈ ನಿರ್ಧಾರ ತೆಗದುಕೊಂಡಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಸದ್ಯಕ್ಕೆ ಒಂದೇ ಕ್ಷೇತ್ರಕ್ಕೆ ಪ್ರತೇಕ್ಯವಾಗಿ ನಾಮಪತ್ರ ಸಲ್ಲಿಸಿರುವುದು ಕುತೂಹಲ ಮೂಡಿಸಿರುವುದಲ್ಲದೇ, ಕುಟಂಬದಲ್ಲಿ ರಾಜಕೀಯ ಶುರುವಾಗಿದೆಯಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಇದನ್ನೂ ಓದಿ : ರಾಯಚೂರಿನ ಗ್ರಾಮೀಣ ಮತ್ತು ಮಾನ್ವಿ ಮೀಸಲು ಕ್ಷೇತ್ರದ ಅಭ್ಯರ್ಥಿಗಳ ನಾಮಪ್ರತ ಸಲ್ಲಿಕೆ
ಇನ್ನು ರಾಯಚೂರು ಗ್ರಾಮೀಣ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್, ಮಾನ್ವಿ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೆಂಕಟಪ್ಪ ನಾಯಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ ಹಂಪಯ್ಯ ನಾಯಕ ತಮ್ಮ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದ್ದಾರೆ. ಇನ್ನೊಂದೆಡೆ, ಟಿಕೆಟ್ ಸಿಗದೆ ನಿರಾಶರಾದ ಮಾಜಿ ಸಂಸದ ಹಾಗೂ ರಾಯಚೂರು ಜಿಲ್ಲೆಯ ಹಾಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ ವಿ ನಾಯಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಮಾನವಿ ವಿಧಾನಸಭಾ ಕ್ಷೇತ್ರದಿಂದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ ವಿ ನಾಯಕ ನಿನ್ನೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಸಲ್ಲಿಸಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಗಮನಕ್ಕೆ ಕೂಡ ತಂದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಬಿಜೆಪಿ ಸೇರ್ಪಡೆ: ಮಾನವಿಯಿಂದ ಟಿಕೆಟ್ ಸಾಧ್ಯತೆ