ರಾಯಚೂರು: ಬಿಜೆಪಿ ಯಾವುದೇ ಕುದುರೆ ವ್ಯಾಪಾರ ಮಾಡಿಲ್ಲ. ಜೆಡಿಎಸ್-ಕಾಂಗ್ರೆಸ್ನಲ್ಲಿದ್ದ ಒಳ ಜಗಳದಿಂದ ಬೇಸತ್ತು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಒಳ ಬೇಗುದಿಯಿಂದ ಮಸ್ಕಿಯ ಪ್ರತಾಪ್ ಗೌಡ ರಾಜೀನಾಮೆ ನೀಡಿದ್ದರು. ಈಗ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವ ಕುರಿತು ಹೈಕಮಾಂಡ್ ತೀರ್ಮಾನಿಸುತ್ತೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡ ದಿಶಾ ಸಭೆಯ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಯಚೂರಿನ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್ ಗೌಡ ಕಾಂಗ್ರೆಸ್ ಒಳ ಜಗಳದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಅವರೀಗ ಚುನಾವಣೆಗೆ ನಿಲ್ಲಬಹುದೆಂದು ಸುಪ್ರೀಂಕೋರ್ಟ್ ತಿಳಿಸಿದೆ. ಬಿಜೆಪಿಯಿಂದ ಟಿಕೆಟ್ ಯಾರಿಗೆ ನೀಡಬೇಕೆಂದು ಪಕ್ಷದ ವರಿಷ್ಠರು, ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಹಿರಿಯ ನಾಯಕರು ಯಾವುದೇ ವಿಚಾರ ಹಾಗೂ ಟೀಕೆ ಮಾಡುವ ಮುನ್ನ ಆಧಾರಗಳಿದ್ದರೆ ನೋಡಬೇಕು. ಇಲ್ಲದೇ ಹೋದಲ್ಲಿ ಮುಜುಗರಕ್ಕೆ ಈಡಾಗುವುದು ಸಾಮಾನ್ಯ ಎಂದು ತಿಳಿಸಿದರು.