ರಾಯಚೂರು: ಜಿಲ್ಲೆಯಲ್ಲಿ ಶನಿವಾರ ರಾತ್ರಿ ವರುಣ ಆರ್ಭಟಿಸಿದ್ದಾನೆ. ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಸ್ಕಿಯ ಗಾಂಧಿ ನಗರದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡುವಂತಾಯಿತು.
![heavy-rainfall-lashes-raichur](https://etvbharatimages.akamaized.net/etvbharat/prod-images/kn-rcr-01a-rain-effect-vis-ka10035_27062021080231_2706f_1624761151_105.jpg)
ರಸ್ತೆಗಳೆಲ್ಲ ನದಿಗಳಂತಾಗಿದ್ದು, ಮನೆಗಳಿಗೆ ನುಗ್ಗಿ ನೀರನ್ನು ಹೊರಹಾಕಲು ಜನರು ಹರಸಾಹಸಪಟ್ಟರು. ಮಸ್ಕಿಯ ವಿವಿಧ ಬಡವಣೆಗಳಲ್ಲಿ ಮಳೆ ನೀರು ನುಗ್ಗಿ ಜನ ಇಡೀ ಪಟ್ಟಣ ಜಲಾವೃತವಾದಂತೆ ಭಾಸವಾಗುತ್ತಿದೆ. ಇಡೀ ರಾತ್ರಿ ಮಲಗಲು ಜಾಗವಿಲ್ಲದೆ, ಜನರು ಜಾಗರಣೆ ಮಾಡುವಂತಾಯಿತು. ಮನೆ ಹೊರಗಡೆ ನಿಲ್ಲಿಸಿದ್ದ ವಾಹನಗಳು ನೀರಲ್ಲಿ ಮುಳುಗಿದ್ದ ದೃಶ್ಯಗಳು ಕಂಡುಬಂದಿವೆ.
ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯ ನಾನಾ ಭಾಗಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಭಾರಿ ಸಂಕಷ್ಟ ಅನುಭವಿಸಿದರು. ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮತ್ತೆ ಮಳೆ ಸುರಿಯುವ ಸಾಧ್ಯತೆಯಿದೆ.
ಈ ಮುಂಗಾರು ಮಳೆಯಿಂದ ಒಂದೆಡೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ಪಟ್ಟಣಗಳಲ್ಲಿನ ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಇದನ್ನೂ ಓದಿ: ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟ.. ಸ್ಥಳಕ್ಕೆ ದೌಡಾಯಿಸಿದ ಬಾಂಬ್ ಸ್ಕ್ವಾಡ್