ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಆ.10 ರಿಂದ 16ರ ವರೆಗೆ ನಡೆಯಲಿದೆ. ಏಳು ದಿನಗಳ ಕಾಲ ಮಠದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರಿಗೆ ಸೂಕ್ತ ವಸತಿ, ಪ್ರಸಾದ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಆ.12 ರಂದು ಪೂರ್ವಾರಾಧನೆ ನಡೆಯಲಿದೆ. ಸಂಜೆ ವೇಳೆ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆ.13 ರಂದು ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ ಟಿಟಿಡಿಯಿಂದ ರಾಯರಿಗೆ ಶೇಷ ವಸ್ತ್ರ ಸಮರ್ಪಣೆ ನಡೆಯಲಿದ್ದು, ನಂತರ ಚಿನ್ನದ ರಥೋತ್ಸವ ನಡೆಯಲಿದೆ.
ಆ.14ರಂದು ಉತ್ತಾರಾರಾಧನೆ ನಿಮಿತ್ತ ಮಹಾ ರಥೋತ್ಸವ ಜರುಗಲಿದೆ. ಇದೇ ವೇಳೆ ಶ್ರೀಮಠದ ಮುಂಭಾಗದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಮಾಧ್ವ ಮಾರ್ಗ ಕಾರಿಡಾರ್ ಹಾಗೂ ಮೂಲ ರಾಮದೇವರ ಪೂಜೆಗಾಗಿ 300 ಕೆಜಿಯ ಬೆಳ್ಳಿ ಮಂಟಪ ಸಮರ್ಪಣೆ ಮಾಡಲಾಗುತ್ತಿದೆ. ಜತೆಗೆ ಸುವರ್ಣ ರಥದ ಜೀರ್ಣೋದ್ಧಾರ, ಮ್ಯೂಜಿಯಂ 2ನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ.
ಆರಾಧನೆ ವೇಳೆ ನಾಲ್ಕು ದಿನಗಳ ನಿರಂತರ ರಜೆ ಬಂದಿರುವುದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಆಗಮಿಸುವ ವೃದ್ಧರೂ, ವಿಕಲಾಂಗರಿಗೆ ಶೀಘ್ರ ದರ್ಶನದ ವ್ಯವಸ್ಥೆ, ಭಕ್ತರಿಗಾಗಿ ಆರು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ನದಿ ಪಾತ್ರದಲ್ಲಿ ಸ್ನಾನಕ್ಕೆ ಶವರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಮುಂಜಾಗ್ರತಾ ಕ್ರಮ ಅನುಸರಿಸುವ ಮೂಲಕ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಸಮಾಜದ ಸಹಬಾಳ್ವೆಯಿಂದ ಮಾತ್ರ ದೇಶದ ಪ್ರಗತಿ ಸಾಧಿಸಲು ಸಾಧ್ಯ: ಶ್ರೀ ಸುಬುಧೇಂದ್ರ ತೀರ್ಥರು