ರಾಯಚೂರು : ಕೊರೊನಾ ಸೋಂಕನ್ನ ನಿಯಂತ್ರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಕೊರೊನಾ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುತ್ತಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಗಂಭೀರವಾಗಿ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹರಡಿರುವ ಕೊರೊನಾ ಸೋಂಕನ್ನು ಸರ್ಕಾರ ಹತೋಟಿಗೆ ತರಬೇಕಾಗಿತ್ತು. ಆದರೆ, ಹತೋಟಿಗೆ ತರುವಲ್ಲಿ ವಿಫಲವಾಗಿದೆ. ಬದಲಾಗಿ ಕೊರೊನಾ ಹೆಸರಿನಲ್ಲಿ ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಸರ್, ಪಿಪಿಟಿ ಸೇರಿ ಹಲವು ಖರೀದಿಯಲ್ಲಿ ಮಾರುಕಟ್ಟೆ ಹಾಗೂ ಬೇರೆ ರಾಜ್ಯದಲ್ಲಿ ಖರೀದಿಸಿದ ಬೆಲೆಗಿಂತ ದುಬಾರಿ ಹಣವನ್ನ ವ್ಯಯ ಮಾಡುವ ಮೂಲಕ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ್ರು.
ವಿಪಕ್ಷಗಳಿಂದ ಕೊರೊನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಾಗಿದೆ. ಆದರೆ, ಕೊರೊನಾ ಹೆಸರಿನಲ್ಲಿ ಲೂಟಿ ಮಾಡುವ ಕೆಲಸವನ್ನು ಮಾಡುತ್ತಿದೆ. ಇದನ್ನ ದಾಖಲೆಗಳ ಸಮೇತವಾಗಿ ಬಹಿರಂಗ ಪಡಿಸಲಾಗುತ್ತಿದೆ. ಸವಿತ ಸಮಾಜ, ಮಡಿವಾಳ ಸಮಾಜ, ನೇಕಾರರಿಗೆ ಸೇರಿ ಸಂಕಷ್ಟದಲ್ಲಿರುವವರಿಗೆ ಸಹಾಯಧನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಘೋಷಣೆಯಂತೆ ಫಲಾನುಭವಿಗಳಿಗೆ ಹಣ ತಲುಪಿಸುವ ಕೆಲಸ ಮಾಡುತ್ತಿಲ್ಲ. ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿದೆ. ಕೊರೊನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದರು.
ಕೊರೊನಾ ಸೋಂಕಿನ ಲಕ್ಷಣವಿರುವವರಿಗೆ ರಮಿಡಿಸ್‌ವಿರ್ ನೀಡಬೇಕು. ಆದರೆ, ರಾಯಚೂರು ಜಿಲ್ಲೆಗೆ ಈವರೆಗೆ ಮಾತ್ರೆಯನ್ನ ಪೂರೈಕೆ ಮಾಡಿಲ್ಲ. ಈ ಬಗ್ಗೆ ಕ್ರಮವಹಿಸಬೇಕಾದ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಿಷ್ಕಾಳಜಿ ವಹಿಸಿದ್ದಾರೆ ಎಂದರು.