ರಾಯಚೂರು: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಮನೆಗಳು ನೆಲಕ್ಕುರುಳಿವೆ. ರೈತರ ಬೆಳೆ ಹಾನಿಯಾಗಿದೆ. ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಶಾಸಕ ಬಸನಗೌಡ ದದ್ದಲ್ ಆರೋಪಿಸಿದ್ದಾರೆ.
ಈಟಿವಿ ಭಾರತನೊಂದಿಗೆ ಮಾತನಾಡಿದ ಶಾಸಕ ಬಸನಗೌಡ ದದ್ದಲ್, ಮನೆ ಕಳೆದುಕೊಂಡವರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ ಸಂತ್ರಸ್ತರಿಗೆ ಈ ಮೊತ್ತ ಸಾಲದು, ಹೆಚ್ಚಿನ ಮೊತ್ತದ ಜತೆಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಮುಂದಾಗಬೇಕು. ಈಗಾಗಲೇ ಸರ್ಕಾರ ಪರಿಹಾರ ವಿತರಿಸುವ ಕಾರ್ಯ ಮಾಡಬೇಕಿತ್ತು. ಆದರೆ ಈವರೆಗೂ ಪೂರ್ಣ ಪ್ರಮಾಣದಲ್ಲಿ ವಿತರಣೆಯಾಗಿಲ್ಲ ಎಂದರು.
ಮಳೆಯಿಂದ ರೈತರಿಗೆ 400 ಕೋಟಿಗೂ ಅಧಿಕ ನಷ್ಟವಾಗಿದ್ದು, ರೈತರಿಗೆ ಪರಿಹಾರ ಒದಗಿಸಬೇಕು. ಗ್ರಾಮೀಣ ಭಾಗದಲ್ಲಿ ಹಳ್ಳಿಗಳ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ತೊಂದರೆ ಉಂಟಾಗಿದೆ. ತಾತ್ಕಾಲಿಕವಾಗಿಯಾದರೂ ಗುಂಡಿಗಳನ್ನು ಮುಚ್ಚಿಸಿ ಜನರ ಓಡಾಟಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ ಇದುವರೆಗೆ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕೆಲಸವಾಗಿಲ್ಲ.
ಈ ಕೂಡಲೇ ಸರ್ಕಾರ ಗ್ರಾಮೀಣ ರಸ್ತೆಗಳು, ರೈತರಿಗೆ ಬೆಳೆ ಪರಿಹಾರ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಒದಗಿಸಿ ಶಾಶ್ವತ ಸೂರು ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.