ರಾಯಚೂರು: ನನ್ನ ಜೊತೆ ಯಾರು ಬರುತ್ತಾರೆ.. ಯಾರು ಇರ್ತಾರೆ.. ಮತ್ತು ಮುಂದಿನ ರಾಜಕೀಯ ನಡೆ ಬಗ್ಗೆ ಸೇರಿದಂತೆ ಎಲ್ಲಾದಕ್ಕೂ ಡಿ.25ಕ್ಕೆ ಅಂದ್ರೆ ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನದಂದು ಉತ್ತರ ನೀಡುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪರೋಕ್ಷವಾಗಿ ಹೇಳಿದ್ದಾರೆ.
ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಕಾರ್ಯಕ್ರಮಕ್ಕೆ ಭಾಗವಹಿಸಲು ಇಲ್ಲಿಗೆ ಬಂದಿದ್ದೇನೆ. ರಾಜಕೀಯ ಜೀವನ ಆರಂಭಿಸಲು ಓಡಾಡುತ್ತಿದ್ದೇನೆ. ಸಾರ್ವಜನಿಕ ಜೀವನಕ್ಕೆ ಮರಳಲು ಶ್ರಮಿಸುತ್ತಿದ್ದೇನೆ. ನನ್ನ ಜೊತೆ ಯಾರು ಇರ್ತಾರೆ, ಯಾರು ಬರ್ತಾರೆ ಅನ್ನೋದನ್ನ ಡಿಸೆಂಬರ್ 25ಕ್ಕೆ ಹೇಳುತ್ತೇನೆ. ಎಲ್ಲಾ ಪ್ರಶ್ನೆಗಳಿಗೆ 25ರಂದು ಉತ್ತರ ಸಿಗುತ್ತೆ ಎಂದು ವಾಜಪೇಯಿ ಜನ್ಮದಿನವನ್ನು ಉಲ್ಲೇಖಿಸದೇ ಜನಾರ್ದನ ರೆಡ್ಡಿ ಹೇಳಿದರು.
ಕಳೆದ 18 ವರ್ಷದಿಂದ ಮಸ್ಕಿಗೆ ನಾನು ಬರುತ್ತಿದ್ದೇನೆ. ಇಂದು ಗಂಗಾವತಿ ದುರ್ಗಾದೇವಿ ಜಾತ್ರೆ ಇದೇ.. ಆ ಜಾತ್ರೆ ಪ್ರಯುಕ್ತ ಇಲ್ಲಿಗೂ ಭೇಟಿ ನೀಡಿದ್ದೇನೆ. ಮಸ್ಕಿಯಲ್ಲಿ ನೂರಾರು ಜನರ ಜೊತೆಗೆ ನನ್ನ ಒಡನಾಟವಿದೆ. ಗಂಗಾವತಿಯಲ್ಲಿ ಮನೆ ಮಾಡಿ ಉತ್ತರ ಕರ್ನಾಟಕ ಓಡಾಟ ಮಾಡಲು ಇಚ್ಛೆಸಿದ್ದೇನೆ. ಡಿಸೆಂಬರ್ 25ನೇ ತಾರೀಖು ಮಹನೀಯರು ಜನಿಸಿದ ದಿನವಾಗಿದೆ. ಇನ್ನೂ ಮೂರು ದಿನಗಳಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ ಎಂದರು.
ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನ: ವಾಜಪೇಯಿ ಅವರು 1924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಜನಿಸಿದರು. ಇವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾ ದೇವಿ. ಇದೆ ಡಿಸೆಂಬರ್ 25ಕ್ಕೆ ವಾಜಪೇಯಿ ಅವರ 99ನೇ ಜನ್ಮದಿನಾಚರಣೆ ಇದ್ದು, ಮಾಜಿ ಪ್ರಧಾನಿಗೆ ಇಡೀ ರಾಷ್ಟ್ರವೇ ಗೌರವ ಸಲ್ಲಿಸಲಿದೆ.
ಓದಿ: ಜನಾರ್ದನ ರೆಡ್ಡಿ ಬಿಜೆಪಿ ಬಿಟ್ಟು ಹೋಗುವ ಯೋಚನೆ ಮಾಡಲ್ಲ : ಸಚಿವ ಶ್ರೀರಾಮುಲು