ರಾಯಚೂರು: ತುಂಗಭದ್ರಾ ನದಿ ತೀರದಲ್ಲಿ ಎಲ್ಲಿ ನೋಡಿದರೂ, ವಿದೇಶಿ ಹಕ್ಕಿಗಳ ಕಲರವ. ಮಾನವಿ ತಾಲೂಕಿನ ದದ್ದಲ್, ಕಾತರಕಿ, ಮದ್ಲಾಪುರ, ಚಿಕಲಪರ್ವಿ ಸೇರಿದಂತೆ ನದಿ ತೀರದ ಗ್ರಾಮಗಳಲ್ಲಿ ಬಾನಾಡಿಗಳ ಲೋಕವೇ ಸೃಷ್ಟಿಯಾಗಿದೆ.
ಇಲ್ಲಿ ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ ಮಂಗೋಲಿಯಾ, ಟಿಬೆಟ್, ಉತ್ತರ ಚೈನಾ, ರಷ್ಯಾ ಸೇರಿದಂತೆ ಅನೇಕ ಭಾಗದ ಹಕ್ಕಿಗಳು ಲಗ್ಗೆ ಇಡುತ್ತವೆ. ಐದಾರು ತಿಂಗಳು ಇಲ್ಲಿಯೇ ನೆಲೆಸಿ ಬಳಿಕ ತಮ್ಮ ತಾಯ್ನಾಡಿಗೆ ತೆರಳುತ್ತವೆ.
ಪಟ್ಟಿಹೆಬ್ಬಾತು, ಕಾಮನ್ ಕ್ರೆನ್, ಸ್ಪಾಟ್ ಬಿಲ್ಡ್ ಡಕ್ ಸೇರಿದಂತೆ ನಾನಾ ರೀತಿಯ ಪಕ್ಷಿಗಳು ತುಂಗಭದ್ರಾ ತೀರಕ್ಕೆ ಬಂದಿವೆ. ಎಲ್ಲಾ ಪಕ್ಷಿಗಳಲ್ಲಿ ವಿಶೇಷ ಪಕ್ಷಿಯೆಂದರೆ ಪಟ್ಟಿಹೆಬ್ಬಾತು, ಇದು ಸುಮಾರು 25 ರಿಂದ 27 ಸಾವಿರ ಅಡಿ ಎತ್ತರಕ್ಕೆ ಹಾರುತ್ತದೆ.
ಈ ವಿದೇಶಿ ಬಾನಾಡಿಗಳನ್ನು ನೋಡಲು ಸಾಕಷ್ಟು ಪಕ್ಷಿ ಪ್ರೇಮಿಗಳು ಇಲ್ಲಿಗೆ ಆಗಮಿಸುತ್ತಾರೆ. ಹವ್ಯಾಸ ಛಾಯಗ್ರಾಹಕರು ಫೋಟೋಗಳನ್ನು ಸೆರೆ ಹಿಡಿಯುವುದಕ್ಕೆ ಇಲ್ಲಿಗೆ ದಾಂಗುಡಿ ಇಡುತ್ತಾರೆ. ನದಿ ತೀರದ ಗ್ರಾಮಸ್ಥರು ಪಕ್ಷಿಗಳ ಸುಂದರ ದೃಶ್ಯವನ್ನು ಸವಿಯುತ್ತಾರೆ. ಆದ್ದರಿಂದ ಈ ಭಾಗದಲ್ಲಿ ಪಕ್ಷಿಧಾಮ ಮಾಡಬೇಕು ಎನ್ನುವುದು ಪಕ್ಷಿಪ್ರೇಮಿಗಳ ಒತ್ತಾಯ.
ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದೇಶಿ ಹಕ್ಕಿಗಳು ನೆಲೆಸಿರುವ ಕಡೆ, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಮುಂಜಾಗ್ರತೆ ವಹಿಸಿಕೊಂಡಿದ್ದಾರೆ.