ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಮಹತ್ವದ ಹೆಗ್ಗುರುತುಗಳಲ್ಲಿ ಒಂದಾದ ಹಳೆ ಬಸ್ ನಿಲ್ದಾಣದ ಕಾಮಗಾರಿ ಬಹುತೇಕ ಪೂರ್ಣಣಗೊಂಡಿದೆ. ಉದ್ಘಾಟನೆಗೆ ಸಿದ್ಧವಾಗಿದ್ದು, ಹಳೆಯ ವರ್ಚಸ್ಸು ಪಡೆದುಕೊಳ್ಳಲಿದೆ. ಹಳೆ ಬಸ್ ನಿಲ್ದಾಣ ಶೀಘ್ರದಲ್ಲೇ ಹೊಸ ರೂಪದೊಂದಿಗೆ ಮತ್ತೆ ತೆರೆದುಕೊಳ್ಳಲಿದೆ. ಸದ್ಯಕ್ಕೆ, ಮುಖ್ಯ ಕಟ್ಟಡ, ಗ್ಲಾಸ್ ಮುಂಭಾಗದ ಕೆಲಸಗಳು ಭರದಿಂದ ಸಾಗಿದೆ. ಈ ತಿಂಗಳ ಅಂತ್ಯಕ್ಕೆ ಎಲ್ಲಾ ಕಾಮಗಾರಿಗಳು ಮುಗಿದು ಕಾರ್ಯಾರಂಭಕ್ಕೆ ಸಿದ್ಧಗೊಳ್ಳುತ್ತಿರುವ ಈ ನಿಲ್ದಾಣ, ಹಲವು ವಿಶೇಷ ಸೌಲಭ್ಯಗಳನ್ನು ಒಳಗೊಂಡಿದ್ದು, ಅತ್ಯಾಕರ್ಷವಾಗಿದೆ.
ಬಸ್ ನಿಲ್ದಾಣ ಈ ಹಿಂದಿನ ಹಳೇ ವರ್ಚಸ್ಸು ಪಡೆದುಕೊಳ್ಳುವುದರ ಜೊತೆಗೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ. ಚೆನ್ನಮ್ಮ ವೃತ್ತದ ಬಳಿಯೇ ಇರುವ ಕಾರಣಕ್ಕೆ ವಾಹನ ದಟ್ಟಣೆ, ಪ್ರಯಾಣಿಕರ ಸುರಕ್ಷತೆ ಹಾಗೂ ಸಾಗುವ ಮಾರ್ಗಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯ ಪ್ರಕಾರ ಟರ್ಮಿನಲ್ 3 ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಕುರಿಂತೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ''ಈ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 2022ರಲ್ಲಿ ಪ್ರಾರಂಭಿಸಲಾಗಿದೆ. 3 ಎಕರೆ 7 ಗುಂಟೆ ಜಾಗದಲ್ಲಿ 42 ಕೋಟಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಮೊದಲನೇ ಹಂತ ಬೇಸ್ಮೆಂಟ್, ಗ್ರೌಂಡ್ ಮಹಡಿ ಮತ್ತು 1ನೇ ಮಹಡಿ ಇರಲಿದೆ'' ಎಂದರು.
ಕಾರ್ಯ ನಿರ್ವಹಣೆ ಹೇಗಿರಲಿದೆ?: ಬಿಆರ್‌ಟಿಎಸ್ ಮತ್ತು ಸಿಟಿ ಸೇವೆಗಳನ್ನು ನೆಲ ಮಹಡಿಯಿಂದ ನಿರ್ವಹಿಸಿದರೆ, ಉಪನಗರ ಸೇವೆಗಳು 1ನೇ ಮಹಡಿಯಿಂದ ಕಾರ್ಯನಿರ್ವಹಿಸುತ್ತವೆ. ನೆಲಮಾಳಿಗೆಯಲ್ಲಿ ಸುಮಾರು 100 ಬೈಕ್‌ಗಳು ಮತ್ತು 70 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬಸ್ ಟರ್ಮಿನಲ್ ಸ್ವಾವಲಂಬಿಯಾಗಲು ಟರ್ಮಿನಲ್ 25,000kW ಸೌರ ವಿದ್ಯುತ್ ಸ್ಥಾವರ ಸೌಲಭ್ಯ ಒದಗಿಸಲಾಗಿದೆ. ಬೇಸ್ಮೆಂಟ್ನಲ್ಲಿ ವಾಹನಗಳ ಪಾರ್ಕಿಂಗ್ಗೂ ಮೀಸಲಿಡಲಾಗಿದೆ.
ಮೊದಲ ನೆಲಮಹಡಿಯಲ್ಲಿ ಬಿಆರ್ಡಿಎಸ್ ಹಾಗೂ ಸಿಟಿ ಬಸ್ ನಿಲ್ದಾಣ ಮೀಸಲಿಡಲಾಗಿದ್ದು, ಸಿಟಿ ಬಸ್ಗಾಗಿ 8 ಬೇಜ್ ಹಾಗೂ ಬಿಆರ್ಡಿಎಸ್ 6 ಬೇಜ್ ಮಾಡಲಾಗಿದೆ. 1,407 ಸ್ಕ್ವೇರ್ ಮೀಟರ್ ವಾಣಿಜ್ಯ ಮಳಿಗೆಗಳನ್ನು ಮಾಡಲಾಗಿದೆ. ಮೊದಲ ಮಹಡಿ ಸಾರಿಗೆ ಬಸ್ಗಾಗಿ ಮೀಸಲಿಡಲಾಗಿದ್ದು, ಕನಿಷ್ಟ 16 ಬಸ್ಗಳು ನಿಂತುಕೊಳ್ಳುವಷ್ಟು ವಿಶಾಲ ಜಾಗ ಇದೆ. ಅದರ ಜತೆಗೆ ಪ್ರತಿ ಮಹಡಿಯಲ್ಲೂ ಪುರುಷರು, ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೊಸ ರೂಪದೊಂದಿಗೆ ತೆರೆದುಕೊಳ್ಳಿರುವ ಬಸ್ ನಿಲ್ದಾಣದ ಬಗ್ಗೆ ಮಾಹಿತಿ ನೀಡಿದರು.
ಚಿಕ್ಕ ಆಸ್ಪತ್ರೆ: ಇದೇ ಮೊದಲ ಬಾರಿಗೆ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸಾ ಘಟಕ ತೆರೆಯಲಾಗುತ್ತದೆ. ಅದಕ್ಕಾಗಿ ಓರ್ವ ವೈದ್ಯ ಸಿಬ್ಬಂದಿ ಹೊಂದಿರುವ ಚಿಕ್ಕ ಆಸ್ಪತ್ರೆಗೆ ಅವಕಾಶ ಕಲ್ಪಿಸಲಾಗಿದೆ. ವೃದ್ಧರು, ಮಕ್ಕಳ ಅನುಕೂಲಕ್ಕಾಗಿ ಲಿಫ್ಟ್ ಹಾಗೂ ಎಕ್ಸಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಈ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. 2 ವರ್ಷ 4 ತಿಂಗಳಲ್ಲಿ ಕಾಮಗಾರಿ ಪೂರ್ಣ ಮಾಡಲಾಗಿದೆ ಎಂದು ರುದ್ರೇಶ ಗಾಳಿ ಮಾಹಿತಿ ನೀಡಿದರು.
ವರ್ಷಾಂತ್ಯಕ್ಕೆ ಉದ್ಘಾಟನೆ: ಸಣ್ಣ-ಪುಟ್ಟ ಕಾಮಗಾರಿಗಳು ಬಾಕಿ ಇದ್ದು, ಡಿಸೆಂಬರ್ ಮೊದಲ ಅಥವಾ ಎರಡನೇ ವಾರ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ಜನಪ್ರತಿನಿಧಿಗಳು ಒಂದು ದಿನಾಂಕ ನಿಗದಿ ಮಾಡಿಕೊಂಡು ಲೋಕಾಪರ್ಣಣೆ ಮಾಡಲಿದ್ದಾರೆ.
ಇದನ್ನೂ ಓದಿ: ನೃಪತುಂಗ ರಸ್ತೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಬಸ್ ನಿಲ್ದಾಣ ಉದ್ಘಾಟನೆ: ಬಿಬಿಎಂಪಿಗೆ ಹಸ್ತಾಂತರ - SMART BUS STAND