ರಾಜ್‌ಗೀರ್ (ಬಿಹಾರ): 'ಹೆಣ್ಮಕ್ಳೇ ಸ್ಟ್ರಾಂಗ್' ಎಂಬುದನ್ನೂ ಭಾರತ ಮಹಿಳಾ ಹಾಕಿ ತಂಡ ಸಾಬೀತು ಮಾಡಿತು. ಇಲ್ಲಿ ಬುಧವಾರ ನಡೆದ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚೀನಾ ಮಹಿಳಾ ತಂಡವನ್ನು 1-0 ಯಿಂದ ಬಗ್ಗುಬಡಿದು ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಚಾಂಪಿಯನ್ ಆಯಿತು.
ಯುವ ಸ್ಟ್ರೈಕರ್ ದೀಪಿಕಾ ಅವರ ರಿವರ್ಸ್ ಹಿಟ್ ಗೋಲಿನಿಂದ ದಾಖಲಾದ ಏಕೈಕ ಗೋಲಿನಿಂದ ಭಾರತ ತಂಡ ಜಯದ ಕೇಕೆ ಹಾಕಿತು. ದೀಪಿಕಾ ಅವರು 31ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು. ಜೊತೆಗೆ ಪಂದ್ಯಾವಳಿಯಲ್ಲಿ 11 ಗೋಲು ಗಳಿಸುವ ಮೂಲಕ ಅತ್ಯಧಿಕ ಸ್ಕೋರರ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
🏆 Champions Again! 🇮🇳🔥
— Hockey India (@TheHockeyIndia) November 20, 2024
Team India clinches the Bihar Women’s Asian Champions Trophy Rajgir 2024 title with a stellar 1-0 victory over China! 🎉💪 The defending champions have shown their grit, skill, and determination, proving once again why they are on top of Asia.
Another… pic.twitter.com/RkCxRI2Pr2
ಲೀಗ್ ಹಂತದಲ್ಲೂ ಭಾರತ ಮಹಿಳೆಯರು ಚೀನಾವನ್ನು 3-0 ಗೋಲುಗಳ ಅಂತರದಿಂದ ಸೋಲಿಸಿದ್ದರು. ಭಾರತಕ್ಕೆ ಇದು ಮೂರನೇ ಎಟಿಸಿ ಪ್ರಶಸ್ತಿಯಾಗಿದೆ. 2016 ಮತ್ತು 2023 ರಲ್ಲಿ ಟ್ರೋಫಿ ಗೆಲುವು ಸಾಧಿಸಿತ್ತು. ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿದಿದ್ದ ತಂಡ ಸತತ ಎರಡನೇ ಮತ್ತು ಒಟ್ಟಾರೆ ಮೂರನೇ ಪ್ರಶಸ್ತಿ ಬಾಚಿಕೊಂಡಿತು.
ಎಸಿಟಿ ಟೂರ್ನಿಯಲ್ಲಿ ಭಾರತ ಮತ್ತು ಕೊರಿಯಾ ತಂಡಗಳು ಮಾತ್ರ ತಲಾ ಮೂರು ಮೂರು ಬಾರಿ ಪ್ರಶಸ್ತಿ ವಿಜೇತವಾಗಿದೆ. ಚೀನಾ ಮೂರನೇ ಬಾರಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಜಿದ್ದಾಜಿದ್ದಿನ ಹೋರಾಟ: ಪಂದ್ಯದುದ್ದಕ್ಕೂ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಭಾರತ ಮತ್ತು ಚೀನಾ ಮಹಿಳೆಯರು ಗೋಲು ಗಳಿಸಲು ಪ್ರಯತ್ನ ನಡೆಸಿದರು. 17 ವರ್ಷದ ಸುನೆಲಿತಾ ಟೊಪ್ಪೊ ತನ್ನ ಡ್ರಿಬ್ಲಿಂಗ್ ಕೌಶಲ್ಯದಿಂದ ರಕ್ಷಣೆ ವಿಭಾಗದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸುವ ಮೂಲಕ ಅದ್ಬುತ ಪ್ರದರ್ಶನ ನೀಡಿದರು.
ಎರಡನೇ ಕ್ವಾರ್ಟರ್‌ನಲ್ಲಿ (18ನೇ ನಿಮಿಷ) ಚೀನಾ ಪಂದ್ಯದ ಮೊದಲ ಪೆನಾಲ್ಟಿ ಕಾರ್ನರ್ ಪಡೆದುಕೊಂಡಿತು. ಆದರೆ, ಭಾರತದ ಎರಡನೇ ಗೋಲ್‌ಕೀಪರ್ ಬಿಚು ದೇವಿ ಕರಿಬಮ್ ಅವರು ಸೊಗಸಾದ ಡೈವಿಂಗ್ ಮೂಲಕ ಗೋಲು ತಡೆದರು. ಮುಂದಿನ ಎರಡು ನಿಮಿಷಗಳಲ್ಲಿ ಭಾರತ ಮಹಿಳೆಯರು ನಾಲ್ಕು ಪೆನಾಲ್ಟಿ ಕಾರ್ನರ್‌ಗಳ ಅವಕಾಶ ಪಡೆದರೂ, ಎಲ್ಲವನ್ನೂ ವ್ಯರ್ಥ ಮಾಡಿಕೊಂಡರು.
ವಿರಾಮದ ನಂತರ ಭಾರತ ತಂಡಕ್ಕೆ ಐದನೇ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಈ ಬಾರಿ ದೀಪಿಕಾ ತಪ್ಪು ಎಸಗದೇ ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳಿದರು. ಇದರಿಂದ ತಂಡ 1-0 ಮುನ್ನಡೆ ಸಾಧಿಸಿತು. ಇದಾದ ಬಳಿಕ ಚೀನಾ ಹೋರಾಟಕ್ಕೆ ಮುಂದಾಯಿತು. ಆದರೆ, ಭಾರತವು ಚೀನಾದ ರಕ್ಷಣಾ ವಿಭಾಗದ ಮೇಲೆ ಒತ್ತಡ ಹಾಕಿ ಪಂದ್ಯವನ್ನು ಗೆದ್ದಿತು.
ಇನ್ನೂ ಮೂರನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಮಲೇಷ್ಯಾವನ್ನು 4-1 ಗೋಲುಗಳಿಂದ ಜಪಾನ್ ಸೋಲಿಸಿತು.
ಇದನ್ನೂ ಓದಿ: ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ಆಶಸ್ಗೆ ಹೋಲಿಸಿದ ರಿಕಿ ಪಾಂಟಿಂಗ್