ನವದೆಹಲಿ: ಕರ್ನಾಟಕದಲ್ಲಿ ನಕಲಿ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡುತ್ತಿರುವ ನಡುವೆಯೇ ದೇಶದಲ್ಲಿ ರದ್ದಾದ ಪಡಿತರ ಚೀಟಿಗಳ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಹಂಚಿಕೊಂಡಿದೆ.
ದೇಶದಲ್ಲಿ 5.80 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ. ಇದುವರೆಗೆ 20.40 ಕೋಟಿ ಪಡಿತರ ಚೀಟಿಗಳ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಬುಧವಾರ ತಿಳಿಸಿದೆ.
ದೇಶದಲ್ಲಿ ಒಟ್ಟು 80.60 ಕೋಟಿ ಫಲಾನುಭವಿಗಳು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿ ಪ್ರಯೋಜನ ಪಡೆಯುತ್ತಿದ್ದಾರೆ. ಆಧಾರ್ ಪರಿಶೀಲನೆ ಮತ್ತು ಇ-ಕೆವೈಸಿ ಪರಿಶೀಲನೆ ಮೂಲಕ ದೇಶಾದ್ಯಂತ 5.80 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ದೇಶಾದ್ಯಂತ 5.33 ಲಕ್ಷ ನ್ಯಾಯ ಬೆಲೆಯ ಅಂಗಡಿಗಳಲ್ಲಿ ಇಪಿಒಎಸ್ ಸಾಧನಗಳು ಲಭ್ಯವಿವೆ. ಇವುಗಳ ಸಹಾಯದಿಂದ ಶೇಕಡಾ 99.8 ರಷ್ಟು ಕಾರ್ಡ್‌ಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ. ಶೇಕಡಾ 98.7 ರಷ್ಟು ಫಲಾನುಭವಿಗಳು ಬಯೋಮೆಟ್ರಿಕ್ ಪರಿಶೀಲನೆಯನ್ನು ಪೂರ್ಣಗೊಳಿಸಿದ್ದಾರೆ. ಶೇಕಡಾ 64 ರಷ್ಟು ಫಲಾನುಭವಿಗಳನ್ನು ಇ-ಕೆವೈಸಿ ಪ್ರಕ್ರಿಯೆಯ ಒಳಗೆ ತರಲಾಗಿದೆ ಎಂದು ಕೇಂದ್ರ ಹೇಳಿದೆ.
ಡಿಜಿಟಲೀಕರಣದಿಂದಾಗಿ ಪಿಡಿಎಸ್ನಲ್ಲಿ ಬೃಹತ್ ಬದಲಾವಣೆ ಬಂದಿದೆ. ಹೀಗಾಗಿ ವಿಶ್ವದಲ್ಲಿ ಆಹಾರ ಸುರಕ್ಷತೆಗೆ ಹೊಸ ಮಾನದಂಡವನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಹೇಳಿದೆ.
ಇದೇ ವೇಳೆ ಆಹಾರ ಪೂರೈಕೆ ವಿಚಾರದಲ್ಲಿ ಭಾರತೀಯ ಆಹಾರ ನಿಗಮವು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಕ್ರಮದಲ್ಲಿ, ಕಾಲಕಾಲಕ್ಕೆ ಸರಕುಗಳ ಸಾಗಣೆಯನ್ನು ಮೇಲ್ವಿಚಾರಣೆ ಮಾಡಲು ವಾಹನ ಸ್ಥಳ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ರೈಲ್ವೆಯೊಂದಿಗೆ ಸಂಪರ್ಕಿಸಲಾಗಿದೆ. ಒಂದು ರಾಷ್ಟ್ರ-ಒಂದು ಪಡಿತರ ಚೀಟಿ ಯೋಜನೆಯಿಂದಾಗಿ ಫಲಾನುಭವಿಗಳು ದೇಶದ ಎಲ್ಲಿ ಬೇಕಾದರೂ ವಸ್ತುಗಳನ್ನು ಖರೀದಿಸಬಹುದು ಎಂದು ಅದು ಹೇಳಿದೆ.
ಇದನ್ನೂ ಓದಿ: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಡಿಸಂಬರ್ 5ರವರೆಗೂ ಗಡುವು ವಿಸ್ತರಿಸಿದ ಹೈಕೋರ್ಟ್