ಉಡುಪಿ: ಎನ್ಕೌಂಟರ್ನಲ್ಲಿ ಮೃತಪಟ್ಟ ನಕ್ಸಲ್ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರ ಹುಟ್ಟೂರಾದ ಕೂಡ್ಲುವಿನ ಮೂಲ ಮನೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಿತು.
ಅದಕ್ಕೂ ಮುನ್ನ ಮಂಗಳವಾರ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವಿಕ್ರಂ ಗೌಡನ ಶವದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ರಾತ್ರಿ 12 ಗಂಟೆಗೆ ಆರಂಭವಾದ ಮರಣೋತ್ತರ ಪರೀಕ್ಷೆಯು ಬುಧವಾರ ಬೆಳಗಿನ ಜಾವ 5 ಗಂಟೆಗೆ ಪೂರ್ಣಗೊಂಡಿತು. ಮರಣೋತ್ತರ ಪರೀಕ್ಷೆ ಬಳಿಕ ಮೂಲ ಮನೆಯಲ್ಲಿ ಅವರ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಕೂಡ್ಲುವಿನಲ್ಲಿ ವಿಕ್ರಂ ಗೌಡ ಅವರ ಮೂಲ ಮನೆ ಇದ್ದು, ಇದೀಗ ತಂಗಿ ಮೂಲ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಇಲ್ಲಿ ಯಾರೂ ವಾಸವಾಗಿಲ್ಲ. ಈ ಮನೆಯ ಆವರಣದಲ್ಲಿ ವಿಕ್ರಂ ಗೌಡನ ಅಂತ್ಯ ಸಂಸ್ಕಾರ ನಡೆಸಲಾಯಿತು. ಇಲ್ಲಿಯೇ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕುಟುಂಬಸ್ಥರು, ಗ್ರಾಮಸ್ಥರು ಸೇರಿದಂತೆ ಸುಮಾರು ನೂರು ಮಂದಿ ವಿಕ್ರಂ ಗೌಡನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ವಿಕ್ರಂ ಗೌಡ ಅವರ ತಂಗಿ ಸುಗುಣ, ನನ್ನ ಅಣ್ಣನನ್ನು ಅನಾಥ ಶವವಾಗಿ ಸುಡುವುದು ಬೇಡ. ಕೂಡ್ಲುವಿನಲ್ಲಿ ಅಣ್ಣನಿಗೆ ಸೇರಿದ ಒಂದು ಎಕರೆ ಭೂಮಿ ಇದ್ದು, ಆ ಸ್ಥಳದಲ್ಲಿಯೇ ಅಂತ್ಯ ಸಂಸ್ಕಾರ ಮಾಡುವುದಾಗಿ ಹೇಳಿದ್ದರು. ಅದರಂತೆ ಹುಟ್ಟಿ ಬೆಳೆದ ಜಾಗದಲ್ಲೇ ಅಂತ್ಯ ಸಂಸ್ಕಾರ ಮಾಡಲಾಯಿತು.
ಹೆಬ್ರಿಯ ಕಾಡಂಚಿನ ಪ್ರದೇಶದಲ್ಲಿ ಎರಡ್ಮೂರು ಮನೆಗಳಿವೆ. ಇದೇ ಕಾಡು ಪ್ರದೇಶದಲ್ಲಿ ಸೋಮವಾರ ಸಂಜೆ 6ಕ್ಕೆ ಗುಂಡಿನ ಚಕಮಕಿ ನಡೆಯಿತು. ನಕ್ಸಲ್ ಹಾಗೂ ಪೊಲೀಸ್ ಸಿಬ್ಬಂದಿ ಮುಖಾಮುಖಿಯಾಗಿ ಎನ್ಕೌಂಟರ್ ನಡೆಸಿದರು. ಈ ಎನ್ಕೌಂಟರ್ನಲ್ಲಿ ಯಾವುದೇ ಸಂಶಯ ಬೇಡ. ವಿಕ್ರಂ ಗೌಡ ಬಳಿ ಮಷೀನ್ ಗನ್, ಪಿಸ್ತೂಲ್, ಚಾಕು ಸಿಕ್ಕಿದೆ. ವಿಕ್ರಂ ಮೇಲೆ ಹಲವಾರು ಕೇಸುಗಳಿವೆ. ಮೋಸ್ಟ್ ವಾಂಟೆಡ್, ಕನ್ಸಲ್ ಮೂವ್ಮೆಂಟ್ ನಾಯಕನಾಗಿದ್ದ ಎಂದು ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಮಾಹಿತಿ ನೀಡಿದ್ದಾರೆ.
ಪ್ಲ್ಯಾನ್ ಮಾಡಿ ಎನ್ಕೌಂಟರ್ ಮಾಡಿಲ್ಲ: ಇದೊಂದು ಪರ್ಫೆಕ್ಟ್ ಎನ್ಕೌಂಟರ್. ಪ್ಲ್ಯಾನ್ ಮಾಡಿ ಮಾಡಿಲ್ಲ. ಸಾಧಾರಣ ಕತ್ತಲಾಗಿರುವ ವಾತಾವರಣ ಆಗಿತ್ತು. ಎಷ್ಟು ಜನ ಇದ್ದರು ಎಎನ್ಎಫ್ಗೆ ಮಾಹಿತಿ ಇಲ್ಲ. ಕಾಡು ಪ್ರದೇಶವಾಗಿದ್ದರಿಂದ ಗ್ರಾಮದ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಕೂಂಬಿಂಗ್ ನಡೆಸುತ್ತಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದರು.
ಎನ್ಕೌಂಟರ್ ಅಲ್ಲ, ಶರಣಾಗತಿ ನಮ್ಮ ಮೂಲ ಉದ್ದೇಶ: ಎನ್ಕೌಂಟರ್ ಅಲ್ಲ, ಶರಣಾಗತಿ ನಮ್ಮ ಮೂಲ ಉದ್ದೇಶ. ಶರಣಾಗತಿಗೆ ನೂರಾರು ದಾರಿಗಳು ಇದೆ. ಸರಂಡರ್ ಪ್ಯಾಕೇಜ್, ಪುನರ್ವಸತಿ ಪ್ಯಾಕೇಜ್ ಇದ್ದು, ಬಳಸಿಕೊಳ್ಳಬಹುದು. ಜನ ಭಯಪಡಬೇಕಾದ ಅವಶ್ಯಕತೆ ಇಲ್ಲ. ಬೇರೆ ಬೇರೆ ಕಡೆ ಕೂಂಬಿಂಗ್ ಮಾಡಿದ್ದೇನೆ. ನಮ್ಮ ತಂಡ ನಿರಂತರ ಕೂಂಬಿಗ್ ಆಪರೇಷನ್ ಮಾಡುತ್ತಲೇ ಇದೆ. ನಾವು ಜನರ ರಕ್ಷಣೆಗಾಗಿಯೇ ಇದ್ದೇವೆ. ನಕ್ಸಲ್ ಚಟುವಟಿಕೆ ಬಗ್ಗೆ ಯಾವುದೇ ಆತಂಕ ಭಯ ಬೇಡ. ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ ಕೇರಳನಡುವೆ ನಕ್ಸಲ್ ಮೂವ್ಮೆಂಟ್ ಇದೆ. ಕೇರಳ ಜೊತೆ ನಮ್ಮ ರಾಜ್ಯದ ಎಎನ್ಎಫ್ ಸಂಪರ್ಕ ಸಂಬಂಧ ಚೆನ್ನಾಗಿದೆ. ನಕ್ಸಲ್ ತಡೆಗೆ ಅಲ್ಲಿಂದ ಸಪೋರ್ಟ್ ಇದೆ. ಊಹಾಪೋಹ ಮತ್ತು ಅರ್ಧ ಸತ್ಯದ ಮಾಹಿತಿಗೆ ಯಾರು ಕಿವಿಗೊಡಬಾರದು ಎಂದು ಡಿಜಿಪಿ ಪ್ರಣಬ್ ಮೊಹಂತಿ ಹೇಳಿದರು.
ಇದನ್ನೂ ಓದಿ: ಎನ್ಕೌಂಟರ್ ನಡೆದ ಸ್ಥಳಕ್ಕೆ ಶೀಘ್ರ ಭೇಟಿ ನೀಡಲಾಗುತ್ತದೆ; ಕೆ. ಪಿ. ಶ್ರೀಪಾಲ್