ರಾಯಚೂರು: ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ತುಂಬಿದ್ದು, ಹೊಲ ಗದ್ದೆಗಳಿಗೆ ನೀರು ನುಗ್ಗಿ ಸುಮಾರು 120 ಎಕರೆ ಬೆಳೆ ನಾಶವಾಗಿದೆ. ಒಂದು ವೇಳೆ ಪ್ರವಾಹ ಹೀಗೆ ಮುಂದುವರೆದರೆ ಇನ್ನುಳಿದ ಬೆಳೆಯು ನಾಶವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಸದ್ಯ ಗುರ್ಜಾಪುರದಲ್ಲಿ ಎಲ್ಲಿ ನೋಡಿದರೂ ನೀರು. ಮನೆ, ಹೊಲ, ಗದ್ದೆಗಳಿಗೆ ನೀರು ನುಗ್ಗಿ ಕೋಟ್ಯಂತರ ರೂ. ನಷ್ಟ ಉಂಟುಮಾಡಿದೆ. ಇನ್ನು, ಇತ್ತೀಚಿಗಷ್ಟೇ ಭತ್ತ ನಾಟಿ ಮಾಡಲಾಗಿತ್ತು. ಆದ್ರೆ ಪ್ರವಾಹದಿಂದ ಬೆಳೆ ನೀರು ಪಾಲಾಗಿದೆ. ಗುರ್ಜಾಪುರ ಬ್ಯಾರೇಜ್ ಮೂಲಕ ಹರಿದು ಬಂದ ನೀರು ರೈತರ ಬದುಕನ್ನೇ ದುಸ್ತರವಾಗಿಸಿದೆ.
ಅರಶಣಗಿ ಹಾಗೂ ಗುರ್ಜಾಪುರ ಸೇರಿದಂತೆ ಸುಮಾರು 120 ಎಕರೆ ಭತ್ತ ನಾಶಗೊಂಡಿದ್ದು, ನೀರಿನ ಪ್ರವಾಹ ಹೆಚ್ಚಾದಂತೆಲ್ಲಾ ಹೆಚ್ಚಿನ ಬೆಳೆ ನಾಶವಾಗುವ ಆತಂಕದಲ್ಲಿದ್ದಾರೆ ರೈತರು. ನಮ್ಮ ಭಾಗದಲ್ಲಿ ಮಳೆ ಬಾರದಿದ್ದರೂ ಮಹಾರಾಷ್ಟ್ರದಲ್ಲಿನ ಮಳೆ ಇಷ್ಟು ಅವಾಂತರ ಸೃಷ್ಟಿಸುತ್ತಿದೆ. ಮುಂದೇನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ ಎನ್ನುತ್ತಾರೆ ಇಲ್ಲಿನ ರೈತರು.
ಮಳೆಯಿಂದಾಗಿ ಬೆಳೆ ನಾಶ ಒಂದು ಕಡೆಯಾದ್ರೆ ರಸ್ತೆ ಸಂಚಾರ ಬಂದ್ ಅಗಿರುವ ಕಾರಣ ಸುತ್ತಲಿನ ಗ್ರಾಮಗಳಿಂದ ವ್ಯಾಪಾರಕ್ಕಾಗಿ ಬರುವ ವ್ಯಾಪಾರಸ್ಥರಿಗೂ ಬಿಸಿ ತಟ್ಟಿದೆ. ವ್ಯಾಪಾರವಿಲ್ಲದೇ ಬಂದ ದಾರಿಗೆ ಸುಂಕವಿಲ್ಲದೆಂಬಂತೆ ಹಿಂದಿರುಗುತ್ತಿದ್ದಾರೆ. ಒಟ್ಟಿನಲ್ಲಿ ಮಹಾ ಮಳೆಯಿಂದ ನಾನಾ ಕಡೆ ಅವಾಂತರ ಸೃಷ್ಟಿಯಾಗಿದೆ.