ರಾಯಚೂರು : ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದ ಮಾರುತಿ ಓಮಿನಿ ವಾಹನವೊಂದನ್ನು ಅಡ್ಡಗಟ್ಟಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಐವರು ದರೋಡೆಕೋರರನ್ನ ಬಂಧಿಸುವಲ್ಲಿ ಮಾನವಿ ಠಾಣಾ ಪೊಲೀಸರು ಯಶ್ವಸಿಯಾಗಿದ್ದಾರೆ. ತನಿಖೆ ನಡೆಸಿದ ಪೊಲೀಸರು ಬಂಧಿತ ಆರೋಪಿಯ ಹೇಳಿಕೆಗೆ ಶಾಕ್ ಆಗಿದ್ದಾರೆ.
ನಗರದ ಎಲ್‌ಬಿಎಸ್ ಬಡವಾಣೆಯ ಶೇಕ್ ಅಬ್ದುಲ್ ಮುಜಾಹಿದ್, ಗುರುಕುಮಾರ, ಮಡ್ಡಿಪೇಟೆ ಸೈಯದ್ ಹಕೀಬ್ ಹುಸೇನ್, ಮುನ್ನೂರುವಾಡಿ ಅಸ್ಲಾಂಪಾಷ, ಮಾನವಿ ಜಲಾಲನಗರದ ನಿವಾಸಿ ವ್ಯಾನ್ ಚಾಲಕ ಗುರುರಾಜ ಬಂಧಿತ ದರೋಡೆಕೋರರು.
ಬಂಧಿತರಿಂದ 5.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್, ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಮಾನವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಓಮಿನಿಯನ್ನು ಬೈಕ್ ಮೂಲಕ ಅಡ್ಡಗಟ್ಟಿದ ದರೋಡೆಕೋರರು, ಮಹಿಳೆಯರ ಬಳಿ ಇದ್ದ ವಡವೆ, ಹಣ, ಮೊಬೈಲ್ಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
5 ಲಕ್ಷ ರೂ. ಮೌಲ್ಯದ 12 ತೊಲೆ ಚಿನ್ನಾಭರಣ, 15 ಸಾವಿರ ರೂ. ಮೌಲ್ಯದ ಮೊಬೈಲ್, 20 ಸಾವಿರ ನಗದು ಸೇರಿದಂತೆ ಒಟ್ಟು 5.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದರು. ಈ ಬಗ್ಗೆ ಜಯನಗರದ ಶ್ರೀಲಕ್ಷ್ಮಿದೇವಿ ಮಾನವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಹಿನ್ನೆಲೆ ದರೋಡೆಕೋರರನ್ನು ಬಂಧಿಸಲು ಎಸ್ಪಿ ಪ್ರಕಾಶ್ ನಿಕ್ಕಂ, ಹೆಚ್ಚುವರಿ ಎಸ್ಪಿ ಹರಿಬಾಬು ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕೊನೆಗೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಓಮಿನಿ ವಾಹನ ಚಾಲಕ ಗುರುರಾಜ್ ಮಹಿಳೆಯರನ್ನ ಕರೆದುಕೊಂಡು ಬರುವುದಾಗಿ ತನ್ನ ನಾಲ್ವರು ಸಹಚರರಿಗೆ ಮಾಹಿತಿ ನೀಡುವ ಮೂಲಕ ದರೋಡೆಗೆ ಸಂಚು ರೂಪಿಸಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ದರೋಡೆಗೈದ ಹಣ, ಬಂಗಾರ, ಮೊಬೈಲ್ ವಶಪಡಿಸಿಕೊಂಡು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ವಿಶೇಷ ತಂಡದ ಕಾರ್ಯಾಚರಣೆಗೆ ಮೇಲಾಧಿಕಾರಿಗಳು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.