ಲಿಂಗಸುಗೂರು : ಜಿಲ್ಲೆಯ ಲಿಂಗಸುಗೂರು ತಾಲೂಕಲ್ಲಿ ಕಳಪೆ ಬಿತ್ತನೆ ಬೀಜ ಪೂರೈಕೆಯಾಗಿರುವುದರ ಕುರಿತು ತನಿಖೆ ನಡೆಸುವಲ್ಲಿ ವಿಫಲರಾದ ಕೃಷಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮುಖಂಡರು ಪ್ರತಿಭಟನೆ ನಡೆಸಿದರು.
2020 ಮಾರ್ಚ್ ತಿಂಗಳಲ್ಲಿ ಸ್ಥಳೀಯ ಸೂರ್ಯ ಅಗ್ರೋ ಬೀಜ ವಿತರಕರು, ಕಳಪೆ ಬೀಜ ಪೂರೈಸಿರುವ ಕುರಿತು ದೂರು ನೀಡಲಾಗಿತ್ತು, ಆದರೆ ಇಂದಿಗೂ ತನಿಖೆ ನಡೆಸಿಲ್ಲ. ಕೂಡಲೇ ಅಂತಹ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಹಾಯಕ ಆಯುಕ್ತರಿಗೆ ರೈತರು ಮನವಿ ಸಲ್ಲಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಉಪ ನಿರ್ದೇಶಕರು ಬೀಜ ವಿತರಕರ ಜೊತೆ ಶ್ಯಾಮೀಲಾಗಿ ರೈತರಿಗೆ ವಂಚನೆ ಮಾಡಿದ್ದಾರೆ. ಕಾರಣ ತನಿಖೆ ನಡೆಸಲು ವಿಫಲರಾಗಿದ್ದಾರೆ ಎಂದು ರೈತರು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಮಾತನಾಡಿ, ಈ ಕುರಿತು ಜಂಟಿ ನಿರ್ದೇಶಕರ ಗಮನ ಸೆಳೆದು ನಾಲ್ಕು ದಿನದಲ್ಲಿ ಖುದ್ದು ಆಗಮಿಸಿ ರೈತರ ಜೊತೆ ಚರ್ಚಿಸಲು ತಿಳಿಸುವೆ. ರೈತರ ಹಿತ ಕಾಪಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ರೈತರಿಗೆ ಭರವಸೆ ನೀಡಿದರು.