ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಸ್ವಚ್ಛ ಭಾರತ ಯೋಜನೆ ಅನುಷ್ಠಾನಗೊಳಿಸುವಲ್ಲಿ ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆ ವಿಫಲವಾಗಿವೆ ಎನ್ನುವ ಆರೋಪ ಕೇಳಿ ಬಂದಿದೆ.
ತಾಲೂಕಿನ ಮಸ್ಕಿ ಹೋಬಳಿಯ ಕೆಲ ಗ್ರಾಮಗಳಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ, ತಿಪ್ಪೆಗುಂಡಿ ಸ್ಥಳಾಂತರ, ಚರಂಡಿ, ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಗಳು ಅನುಷ್ಠಾನಕ್ಕೆ ಬಂದಿಲ್ಲ. ಲಕ್ಷಾಂತರ ರೂ. ಹಣದಲ್ಲಿ ಸಕ್ಕಿಂಗ್ ವಾಹನಗಳನ್ನು ಖರೀದಿ ಮಾಡಿದ್ದು, ಅದರ ಬಳಕೆಯೂ ಇಲ್ಲದೆ ಮೂಲೆ ಗುಂಪು ಆಗಿವೆ ಎನ್ನಲಾಗಿದೆ.
ಘನತ್ಯಾಜ್ಯ ವಿಲೆವಾರಿಗೆ ಕಸ ಸಾಗಣೆ ವಾಹನ, ಅಗತ್ಯ ಸಾಮಗ್ರಿ ಖರೀದಿ ಕಾರ್ಯ ನಡೆದಿವೆ. ಅದರೆ ಶೌಚಾಲಯದ ಹೆಸರಲ್ಲಿ ಹೊನ್ನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.
ಆನೆಹೊಸೂರು, ಆಮದಿಹಾಳ, ನಂದಿಹಾಳ, ಹೊನ್ನಹಳ್ಳಿ, ನೀರಲಕೇರಿ, ಗುಂಡಸಾಗರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ವೈಜ್ಞಾನಿಕ ಚರಂಡಿಗಳ ಕೊರತೆ, ಅಗತ್ಯ ಸಿಬ್ಬಂದಿ, ಗುತ್ತಿಗೆದಾರರ ಕೊರತೆ ಕಂಡುಬಂದಿದ್ದು, ಸ್ವಚ್ಛ ಭಾರತ ಅಭಿಯಾನ ಜಾರಿಯಾಗಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಗ್ರಾಮೀಣ ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿರುವ ಅವೈಜ್ಞಾನಿಕ, ಅನವಶ್ಯಕ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೆ ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂದು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ.