ರಾಯಚೂರು: ಪಶುಗಳಿಗೆ ಹರಡುವ ಲಂಪಿಸ್ಕಿನ್ ರೋಗದ ಕುರಿತು ರೈತರು ಭಯಪಡದೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದಲ್ಲಿ ರೋಗ ನಿಯಂತ್ರಣ ಸಾಧ್ಯವಿದೆ ಎಂದು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಶಿವಣ್ಣ ತಿಳಿಸಿದರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಲಂಪಿಸ್ಕಿನ್ ವೈರಾಣುವಿನಿಂದ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಇದೊಂದು ಸಿಡುಬು ರೋಗವಾಗಿದೆ. ಇದು ರಾಜ್ಯ ಸೇರಿದಂತೆ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ರೋಗ ವ್ಯಾಪಿಸಿದ್ದು, ಜಿಲ್ಲೆಯ 4,892 ಜಾನುವಾರುಗಳಿಗೆ ರೋಗ ತಗುಲಿದೆ. ಅದರಲ್ಲಿ 4,147 ಜಾನವಾರುಗಳು ಗುಣಮುಖವಾಗಿದ್ದು, 5 ಬಲಿಯಾಗಿವೆ.
ರಾಯಚೂರು ತಾಲೂಕಿನಲ್ಲಿ 1,415, ಸಿಂಧನೂರು 861, ಲಿಂಗಸೂಗೂರು 115, ದೇವದುರ್ಗ 1,932, ಮಾನ್ವಿ 569 ಜಾನುವಾರುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಲಂಪಿಸ್ಕಿನ್ ವೈರಾಣು ಜಾನುವಾರುಗಳ ಮೇಲೆ ದಪ್ಪಗುಳ್ಳೆ ತರಹ ಕಾಣಿಸಿಕೊಳ್ಳುತ್ತದೆ. ರೈತರು ಸೂಕ್ತ ಸಮಯದಲ್ಲಿ ರೋಗ ಪತ್ತೆ ಹಚ್ಚಿ, ಅನಾರೋಗ್ಯಕ್ಕೆ ಒಳಗಾದ ಜಾನುವಾರಗಳನ್ನು ಉಳಿದ ಜಾನುವಾರುಗಳಿಂದ ಬೇರ್ಪಡಿಸಿದಲ್ಲಿ ರೋಗ ಹರಡುವಿಕೆ ನಿಯಂತ್ರಿಸಬಹುದಾಗಿದೆ. ಈ ರೋಗಕ್ಕೆ ಚಿಕಿತ್ಸೆ ಪಶುವೈದ್ಯ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಔಷಧಿಗಳ ಕೊರತೆಯಿಲ್ಲ. ಇಲಾಖೆಯಿಂದ ಪ್ರತಿ ಗ್ರಾಮದಲ್ಲಿ ರೈತರಿಗೆ ಇದರ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.