ರಾಯಚೂರು: ಅಂಗನವಾಡಿ ಕೇಂದ್ರಗಳಿಗೆ ಮಂಜೂರಾದ ಶೌಚಾಲಯ ಕಾಮಗಾರಿ ನಿರ್ಮಾಣ ಮಾಡಲು ಗುತ್ತಿಗೆ ವಹಿಸಿಕೊಂಡ ಸಂಸ್ಥೆಗಳ ಜೊತೆಗೆ ಅಧಿಕಾರಿಗಳು ಶಾಮೀಲಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಕೇಶವರೆಡ್ಡಿ, ಶಿವಜ್ಯೋತಿ ಶ್ರೀನಿವಾಸರೆಡ್ಡಿ ಕೆಡಿಪಿ ಸಭೆಯಲ್ಲಿ ಧರಣಿ ನಡೆಸಿದರು.
ನಗರದ ಜಿ.ಪಂ.ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಸಭೆ ಆರಂಭವಾಗುತ್ತಿದ್ದಂತೆ, 2016-17ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಮಂಜೂರಾದ ಶೌಚಾಲಯ ನಿರ್ಮಾಣ ಮಾಡುವಲ್ಲಿ ಗುತ್ತಿಗೆ ಸಂಸ್ಥೆಗಳು ವಿಳಂಬ ನೀತಿ ಅನುಸರಿಸುತ್ತಿವೆ. ಅದಕ್ಕೆ ಅಧಿಕಾರಿಗಳು ಕೂಡ ಸಹಕರಿಸುತ್ತಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಧರಣಿ ನಡೆಸಿದರು.
ಜಿಲ್ಲೆಯಲ್ಲಿ ಕ್ಯಾಶುಟೆಕ್‌ಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದರೂ, ಕಟ್ಟಡ ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ಮತ್ತು ಏಜಿನ್ಸಿಯವರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಪ್ರತಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರೂ ಸಹ ಅಧಿಕಾರಿಗಳ ಮೇಲೆ ಯಾವುದೇ ಶಿಸ್ತುಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ತಮ್ಮ ಹಾರಿಕೆ ಉತ್ತರದ ಮೂಲಕ ಸಭೆಯ ಗಂಭೀರತೆ ಕಡಿಮೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಿಇಒ ಶೇಖ್ ತನ್ವೀರ್ ಆಸಿಫ್ ನಿಮ್ಮ ಸ್ಥಾನಗಳಿಗೆ ಮರಳಿ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. ಇದಕ್ಕೆ ಕ್ಯಾರೇ ಅನ್ನದ ಸ್ಥಾಯಿ ಸಮಿತಿ ಅಧ್ಯಕ್ಷರು ತಮ್ಮ ಧರಣಿ ಮುಂದುವರೆಸಿದರು.