ರಾಯಚೂರು: ಈ ಹಿಂದೆ ಕೆಲ ಕಾಲ ಲಾಕ್ಡೌನ್ ಮಾಡಲಾಗಿತ್ತು. ಆದರೂ ಸೋಂಕು ಹೆಚ್ಚಾಗುತ್ತಿದೆ. ಅದಕ್ಕೆ ಕೊರೊನಾ ತಡೆಗೆ ಲಾಕ್ಡೌನ್ ಒಂದೇ ಪರಿಹಾರವಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದರು.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಲಾಕ್ಡೌನ್, ಸೀಲ್ಡೌನ್ನಿಂದ ಕೊರೊನಾ ತಡೆಯಲು ಆಗಲ್ಲ. ಜನರು ಕೂಡ ಸರ್ಕಾರದ ಜೊತೆ ಕೈ ಜೋಡಿಸಬೇಕು. ಆಗ ಮಾತ್ರ ಕೊರೊನಾ ತಡೆಯಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷದವರು ವಿರೋಧ ಮಾಡುವುದಕ್ಕಾಗಿ ವಿರೋಧವನ್ನ ಮಾಡಬಾರದು. ಹೆಚ್ಡಿಕೆ ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಲಾಕ್ಡೌನ್ ಮಾಡಿದರೆ, ನೌಕಕರಿಗೆ ಸಂಬಳ ಹೇಗೆ ನೀಡಬೇಕು. ಪ್ರತಿ ತಿಂಗಳು ₹ 5-6 ಸಾವಿರ ಕೋಟಿ ಸಂಬಳ ನೀಡಬೇಕಾಗುತ್ತದೆ. ಹೆಚ್ಡಿಕೆ ಅವರು, ಮಾಜಿ ಸಿಎಂ ಅವರು ಜವಾಬ್ದಾರಿಯಿಂದ ಅರ್ಥಮಾಡಿಕೊಂಡು ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಟಾಂಗ್ ನೀಡಿದರು.
ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ದರ ನಿಗದಿ ಮಾಡಿದೆ. ಸರ್ಕಾರ ನಿಯಮದಂತೆ ಖಾಸಗಿ ಆಸ್ಪತ್ರೆಗಳು ನಡೆದುಕೊಳ್ಳಬೇಕು. ಒಂದು ಸುಲಿಗೆ ಮಾಡಿದರೂ ಆಸ್ಪತ್ರೆಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದ್ದೇವೆ. ಸಿರಿವಂತರು ನಮಗೆ ಸರ್ಕಾರಿ ಆಸ್ಪತ್ರೆ ಬೇಡ ಎನ್ನುತ್ತಿದ್ದಾರೆ ಅಂತಹವರಿಗಾಗಿ ಖಾಸಗಿ ಆಸ್ಪತ್ರೆಗೆ ದರ ನಿಗದಿ ಮಾಡಿದ್ದೇವೆ. ಹಸಿರು ವಲಯಗಳಿಗೆ ಮಾತ್ರ ರಾಜ್ಯದಿಂದ ಬಸ್ ಸಂಚಾರ ಆರಂಭಿಸಲಾಗುತ್ತಿದೆ. ಕೆಂಪು ವಲಯ ಅದರಲ್ಲೂ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಆರಂಭಿಸುವ ಚಿಂತನೆಯಿಲ್ಲ ಎಂದರು.
ಬೆಂಗಳೂರಿನಲ್ಲಿ ಈ ರೀತಿ ಸೂಚನೆ ನೀಡಿದ್ದ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಸಂಸ್ಥೆಗೆ ಆರ್ಥಿಕ ನಷ್ಟವುಂಟಾಗುತ್ತಿದ್ದರೂ ನಿಯಮಗಳನ್ನು ಪಾಲಿಸಲು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷೆ ಪ್ರವೇಶಾತಿ ಪತ್ರ ಇಲ್ಲವೆ ಗುರುತಿನ ಚೀಟಿ ತೋರಿಸಿದರೆ, ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ತಿಳಿಸಿದರು.