ರಾಯಚೂರು:ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ನಾನಾ ಕಸರತ್ತು ನಡೆಸಿದರೂ ಇಂದು ಜಿಲ್ಲೆಯಲ್ಲಿ ನಾಲ್ವರು ಶಂಕಿತರು ಆಸ್ಪತ್ರೆಗೆ ದಾಖಲಾಗಿರುವುದು ಆತಂಕ ಮೂಡಿಸಿದೆ.
ಜಿಲ್ಲಾಡಳಿತ ಈಗಾಗಲೇ ಸಾಕಷ್ಟು ಕಟ್ಟೆಚ್ಚರ ವಹಿಸಿದೆ. ಜಿಲ್ಲೆಗೆ ಈವರೆಗೆ ವಿದೇಶಗಳಿಂದ ಒಟ್ಟು 171 ಮಂದಿ ಮರಳಿದ್ದಾರೆ. ಅದರಲ್ಲಿ ಏಳು ಜನರ ಗಂಟಲಿನ ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಐದು ವರದಿಗಳು ನೆಗೆಟಿವ್ ಆಗಿದ್ದು, ರೋಗ ಲಕ್ಷಣಗಳು ಇಲ್ಲದ ಕಾರಣ ಎರಡು ತಿರಸ್ಕೃತ ಮಾಡಲಾಗಿದೆ. ಹೊರ ದೇಶದಿಂದ ಬಂದವರು, ಶಂಕಿತರು ಸೇರಿ ಅವರ ಕುಟುಂಬದ 715 ಜನರನ್ನು ಹೋಮ್ ಕ್ವಾರೆಂಟೇನ್‌ನಲ್ಲಿಟ್ಟಿದ್ದು, ಸೂಕ್ತ ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲೆಯಿಂದ ಈವರೆಗೆ ಕಳುಹಿಸಲಾದ ವರದಿಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದ್ದಾರೆ. ಪೊಲೀಸರು ಕೂಡ ಸಾಕಷ್ಟು ಕಟ್ಟೆಚ್ಚರ ವಹಿಸಿದ್ದು, ಅನಗತ್ಯವಾಗಿ ಓಡಾಡುವ ಜನರ ಮೇಲೆ ಲಾಠಿ ಪ್ರಹಾರ ಕೂಡ ನಡೆಸಿದ ಕಾರಣ ನಗರ ಸಂಪೂರ್ಣ ಇಂದು ಸ್ತಬ್ಧವಾಗಿತ್ತು.