ರಾಯಚೂರು: ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಾಯಚೂರು ಜಿಲ್ಲೆಯಲ್ಲಿ ಅರ್ಹರಲ್ಲದವರಿಗೆ ಕಾಮಗಾರಿ ಗುತ್ತಿಗೆ ನೀಡಿ ಕಳಪೆ ಕಾಮಗಾರಿ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗುತ್ತಿಗೆದಾರ ಬೂಡನಗೌಡ ಜಾಗಟಗಲ್ ಆರೋಪಿಸಿದ್ದಾರೆ.
ನಗರದಲ್ಲಿ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ರು. ಲೈಸನ್ಸ್ ಇರುವ ಅರ್ಹ ಗುತ್ತಿಗೆದಾರರಿಗೆ ಟೆಂಡರ್ ನಿಯಮಾನುಸಾರ ಕಾಮಗಾರಿ ನೀಡುವ ಮೂಲಕ ಕಾಮಗಾರಿಯ ಗುಣಮಟ್ಟವನ್ನ ನೋಡಿಕೊಳ್ಳಬೇಕು. ಆದ್ರೆ ರಾಯಚೂರು ದೇವದುರ್ಗ ತಾಲೂಕಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳೀಯ ಶಾಸಕರು ಹೇಳಿದವರಿಗೆ ಗುತ್ತಿಗೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ರು. ಜಾಗಟಗಲ್ ಗ್ರಾಮವೊಂದರಲ್ಲಿ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ 50 ಲಕ್ಷ ರೂಪಾಯಿ ಟೆಂಡರ್ ಕರೆಯಲಾಗಿತ್ತು. ಇದಕ್ಕೆ ಅರ್ಹ ಲೈಸೆನ್ಸ್ ಹೊಂದಿದ ಗುತ್ತಿಗೆದಾರ ಶೇ. 30ರಷ್ಟು ಲೇಸ್ ಹಾಕುವ ಮೂಲಕ ಟೆಂಡರ್ ಹಾಕಿದ್ರು. ಆದ್ರೆ ಈ ಗುತ್ತಿಗೆದಾರನಿಗೆ ಕೆಲಸ ನೀಡಬಾರದು ಎನ್ನುವ ಕಾರಣಕ್ಕೆ ಕರೆದಿರುವ ಟೆಂಡರ್ ಅನ್ನೇ, ಎರಡನೇ ಬಾರಿ ಕರೆದರು ಎಂದು ದೂರಿದ್ರು.
ಮತ್ತೊಂದೆಡೆ ಲೈಸೆನ್ಸ್ ಹೊಂದಿರುವ ಗುತ್ತಿಗೆದಾರ ಟೆಂಡರ್ ಹಾಕಿದ್ದಾರೆ. ಆದ್ರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳೀಯ ಶಾಸಕರ ಪ್ರಭಾವಕ್ಕೆ ಒಳಗಾಗಿ, ಅರ್ಹತೆ ಇಲ್ಲದ ಗುತ್ತಿಗೆದಾರನಿಗೆ ಕೆಲಸ ನೀಡಿದ್ದಾರೆ. ಪರಿಣಾಮ ಸಿಸಿ ಕಾಮಗಾರಿ ಸಹ ಕಳಪೆಯಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 14 ಲಕ್ಷ ರೂಪಾಯಿವರೆಗೆ ನಷ್ಟ ಮಾಡಿದ್ದಾರೆ. ಇದು ಜಾಗಟಗಲ್ ಗ್ರಾಮ ಒಂದರ ಕಥೆಯಲ್ಲ ತಾಲೂಕಿನಾದ್ಯಂತ ಇಂತಹ ಕೆಲಸವನ್ನ ಬಿಜೆಪಿ ಶಾಸಕರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇದೇ ವೇಳೆ ನಿಯಮಬಾಹಿರ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ತಿಳಿಸಿದ್ರು.