ರಾಯಚೂರು: ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಪರ ಮತಯಾಚನೆಗೆ ಬೃಹತ್ ಪ್ರಚಾರ ಸಮಾವೇಶ ಏರ್ಪಡಿಸಲಾಗಿತ್ತು. ಈ ಸಮಾವೇಶಕ್ಕೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ತಡವಾಗಿ ಆಗಮಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಗಾ ಭಾಷಣ ಕೇಳಲು ದೂರದೂರುಗಳಿಂದ ಆಗಮಿಸಿದ ಜನರು ಯುವರಾಜನಿಗಾಗಿ ಕಾದು ಸುಸ್ತಾದರು.
ಪ್ರಚಾರ ಸಭೆಗೆ ಪೂರ್ವನಿಗದಿಯಂತೆ ರಾಹುಲ್ ಗಾಂಧಿ ಮಧ್ಯಾಹ್ನ 3ಕ್ಕೆ ಆಗಮಿಸಬೇಕಿತ್ತು. ಆದರೆ ಅವರು ವೇದಿಕೆಗೆ ಬಂದಾಗ ಸಮಯ 4 ಗಂಟೆ ಆಗಿತ್ತು. ರಾಯಚೂರಿನಲ್ಲಿ ಸದ್ಯ ತಾಪಮಾನ 40 ಡಿಗ್ರಿ ಮೀರುತ್ತಿದೆ. ಹೀಗಾಗಿ ಜನರು ಬಿಸಿಲಿನ ಧಗೆಗೆ ಕಾದು ಕಾದು ಸುಸ್ತಾಗಿ ನೀರಿಗಾಗಿ ಪರಿತಪಿಸಿದರು.
ಇದೇ ಸಮಯವನ್ನು ಲಾಭಕ್ಕೆ ಬಳಸಿಕೊಂಡ ಹೋಟೆಲ್ ಮಾಲೀಕರು ಹೆಚ್ಚಿನ ದರದಲ್ಲಿ ಒಗ್ಗರಣೆ,, ಮಿರ್ಚಿ ಮಾರಾಟ ಮಾಡಿ ಜೇಬು ತುಂಬಿಸಿಕೊಂಡರು. ಸಮಾವೇಶದ ಅಂಗವಾಗಿ ಜನರಿಗೆ ಮಜ್ಜಿಗೆ, ನೀರು ವಿತರಿಸಲಾಯಿತಾದರೂ, ಅನೇಕರಿಗೆ ಸಿಗದೆ ಖಾಸಗಿ ಹೋಟೆಲ್ಗಳ ಮೊರೆ ಹೋಗುತ್ತಿದ್ದರು.
ರಾಯಚೂರು ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ರಾಯಚೂರು ನಗರವೂ ಒಂದು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ತಾಲೂಕು ಸೇರಿದಂತೆ ಹೈದ್ರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು. ಜನರನ್ನು ನಿಂಯತ್ರಿಸಲು ಪೋಲೀಸರು ಹರಸಾಹಸಪಟ್ಟರು.