ಮಸ್ಕಿ(ರಾಯಚೂರು): ಮಸ್ಕಿ ಉಪ ಚುನಾವಣೆಯಲ್ಲಿ ದಾಖಲೆ ಪ್ರಮಾಣದ 30,606 ಮತಗಳಿಂದ ಅಂತರದಿಂದ ಕೈ ಅಭ್ಯರ್ಥಿ ಬಸವನಗೌಡ ತುರವಿಹಾಳ ಅವರು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರಿಗೆ ಭಾರಿ ಮುಖಭಂಗವಾಗಿದೆ.
ನಗರದ ಎಸ್ಆರ್ಪಿಎಸ್ ಕಾಲೇಜಿನಲ್ಲಿ ನಡೆದ ಒಟ್ಟು 26 ಸುತ್ತಿನ ಮತ ಎಣಿಕೆಯಲ್ಲಿ ಮೊದಲಿನಿಂದಲೂ ಕೈ ಅಭ್ಯರ್ಥಿ ಮುಂಚೂಣಿ ಸಾಧಿಸುತ್ತ ಅಂತಿಮವಾಗಿ 30,606 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಒಟ್ಟು 86,337 ಮತ ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ 55,731 ಮತಗಳನ್ನು ಗಳಿಸಿದರು.
ಪ್ರತಾಪಗೌಡ ಪಾಟೀಲ್ ರಾಜೀನಾಮೆಯಿಂದ ತೆರವಾಗಿದ್ದ ಮಸ್ಕಿ ಕ್ಷೇತ್ರದ ಉಪ ಚುನಾವಣೆ ತೀವ್ರ ಜಿದ್ದಾ ಜಿದ್ದಿಯ ಕಣವಾಗಿ ಮಾರ್ಪಟ್ಟಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅವರ ಸಂಪುಟ ಸಚಿವರು ಪ್ರತಾಪಗೌಡ ಪಾಟೀಲ್ ಪರವಾಗಿ ಮತಯಾಚನೆ ಮಾಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರವಿಹಾಳ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರು ಪ್ರಚಾರ ನಡೆಸಿದ್ದರು.
ಇದನ್ನೂ ಓದಿ: ಬಸವಕಲ್ಯಾಣ: 4ನೇ ಸುತ್ತಿನಲ್ಲೂ ಬಿಜೆಪಿಯ ಶರಣು ಸಲಗರ 5,732 ಮತಗಳ ಮುನ್ನಡೆ