ಲಿಂಗಸುಗೂರು (ರಾಯಚೂರು): ಶಾಸಕ ಡಿ ಎಸ್ ಹೂಲಗೇರಿ ಕೊರೊನಾದಿಂದ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಕಾಂಗ್ರೆಸ್ ಕಾರ್ಯಕರ್ತರು ತೊಂಡಿಹಾಳ ಹುಲಿಗೆಮ್ಮ ದೇವಿಗೆ ಪೂಜೆ ಸಲ್ಲಿಸಿದರು.
ಕೊರೊನಾ ವೈರಸ್ ಹಾವಳಿಯ ಮಧ್ಯೆಯೂ ಲಿಂಗಸುಗೂರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರಳು ಶ್ರಮಿಸುತ್ತಿದ್ದ ಶಾಸಕ ಹೂಲಗೇರಿ ಅವರಿಗೆ ಕೊರೊನಾ ದೃಢಪಟ್ಟಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಿ ಮತ್ತೆ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಲಿ ಎಂದು ಪ್ರಾರ್ಥಿಸಿ ಆನೆಹೊಸೂರು ಜಿಲ್ಲಾ ಪಂಚಾಯತ್ ಸದಸ್ಯ ಬಸನಗೌಡ ಕಂಬಳಿ ನೇತೃತ್ವದಲ್ಲಿ ತೊಂಡಿಹಾಳ ಹುಲಿಗೆಮ್ಮ ದೇವಿಗೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಮೇಶ್ ಗುತ್ತೇದಾರ್, ಶಾಸಕ ಡಿ ಎಸ್ ಹೂಲಗೇರಿ ಅವರು ಕೊರೊನಾದಿಂದ ಬೇಗನೇ ಗುಣಮುಖರಾಗಲಿ. ಆದಷ್ಟು ಬೇಗ ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರಲಿ ಎಂದರು.