ರಾಯಚೂರು: ಬಿಸಿಲುನಾಡು ರಾಯಚೂರಿನಲ್ಲಿ ಮಂಗಳವಾರ ಗ್ರಾಮ ವಾಸ್ತವ್ಯ ಮಾಡಿದ ಸಿ.ಎಂ.ಕುಮಾರಸ್ವಾಮಿಗೆ ರೈತಾಪಿ ವರ್ಗ ಸೇರಿದಂತೆ ಕಾರ್ಮಿಕರು, ವಿಶೇಷಚೇತನರು ಸೇರಿದಂತೆ ಹಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಕರೆಗುಡ್ಡದಲ್ಲಿ ಹಾಕಿದ ಟೆಂಟ್ನಲ್ಲಿ ಗಾಳಿಯೂ ಸರಿಯಾಗಿ ಬಾರದ ಕಾರಣ ಸೆಕೆಯಲ್ಲೂ ಸಿಎಂ ಜನರ ಸಮಸ್ಯೆ ಆಲಿಸಿದರು. ಮಧ್ಯಾಹ್ನದಿಂದ ರಾತ್ರಿ 10:30ರವರೆಗೆ ವಿಶೇಷಚೇತನರ, ಮಹಿಳೆಯರ, ವಯೋವೃದ್ಧರ ಸಮಸ್ಯೆ ಅಲಿಸಿ ಪರಿಹಾರೋಪಾಯದ ಭರವಸೆ ನೀಡಿದರು.
ಇನ್ನು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಸಾವಿರಾರು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಅಲ್ಲದೆ ಸಮಸ್ಯೆ ಹೇಳಿಕೊಳ್ಳಲು ತನಗೆ ಅವಕಾಶ ಸಿಗಲಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು, ಕಾರ್ಮಿಕರು, ವಿಶೇಷಚೇತನರು, ಮಹಿಳೆಯರು, ನಿರುದ್ಯೋಗಿಗಳು, ಮಾಸಾಶನದ ಸಮಸ್ಯೆ ಇರುವವರು, ವೇತನ ಪಾವತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಅಲಿಸಿ ಸೂಕ್ತ ಪರಿಹಾರ ನೀಡುವ ಕುರಿತು ಸಿಎಂ ಭರವಸೆ ನೀಡಿದರು.