ರಾಯಚೂರು: ಕೋವಿಡ್ ಬಂದಾಗ ಸೋಂಕಿನಿಂದ ಸತ್ತವರಿಗೆ ದುಡ್ಡು ಕೊಡುತ್ತೇವೆ ಎಂದು ಹೇಳಿ, ಕೊಟ್ಟಿಲ್ಲ. ಇವರು ಸತ್ತವರ ಹಣ ತಿಂದ ಪಾಪಿಗಳು. ಸಾವಿರಾರು ಜನರು ಮೃತಪಟ್ಟರೂ ಲಕ್ಷ ರೂಪಾಯಿಯನ್ನೂ ಕೊಡಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಬಿಜೆಪಿ ವಿರುದ್ಧ ಆರೋಪ ಮಾಡಿದರು.
ಕೋವಿಡ್ ಬಂದ್ರೆ ಇವರಿಗೆ ಹಬ್ಬ: ರಾಜ್ಯದಲ್ಲಿ ಕೋವಿಡ್ ಬಂತಂದ್ರೆ ಇಬ್ಬರಿಗೆ ಹಬ್ಬದಂತೆ. ಆರೋಗ್ಯ ಸಚಿವ ಸುಧಾಕರ್ ಮುಖದ ಮೇಲೆ ನಗು ಮೂಡುತ್ತದೆ. ಧಮ್ ಇದ್ರೆ ಕೋವಿಡ್ ಭ್ರಷ್ಟಾಚಾರದ ಬಗ್ಗೆ ವಿಚಾರಣೆ ನಡೆಯಲಿ, ಸಾಕ್ಷಿಗಳನ್ನು ನಾವು ಕೊಡುತ್ತೇವೆ ಎಂದು ಸವಾಲು ಹಾಕಿದರು.
ಪಂಚರತ್ನ ಯಾತ್ರೆ ನಿಲ್ಲಿಸಲು ಷಡ್ಯಂತ್ರ: ಕೋವಿಡ್ ಸಂದರ್ಭದಲ್ಲಿ ಬಡವರು 10 ರೂಪಾಯಿ ಕೊಟ್ಟು ಹಾಲು ಖರೀದಿಸಲು ಒದ್ದಾಡುತ್ತಿದ್ದರು. ಈಗಿನ ಕೋವಿಡ್ ನಮ್ಮ ಪಂಚರತ್ನ ಯಾತ್ರೆ ನಿಲ್ಲಿಸಲು ಒಂದು ಷಡ್ಯಂತ್ರ. ಕೋವಿಡ್ ಎಲ್ಲರಿಗೂ ಬಂದು ಹೋಗಿದೆ. ಜೋಳ, ಮೆಂತೆ, ಕಾಳು ಪಲ್ಯೆ, ಮೆಣಸಿನಕಾಯಿ ತಿನ್ನುವ ಮಂದಿ ನಾವು. ನಾಲ್ಕು ನಾಲ್ಕು ಜೋಳದ ರೊಟ್ಟಿ ತಿನ್ನುವವರು ಎಂದು ಹೇಳಿದರು.
ಬೊಮ್ಮಾಯಿಗೆ ಅಧಿಕಾರ ಇಲ್ಲ: ದೇಶದಲ್ಲಿ ಅಧಿಕಾರವಿಲ್ಲದ ಸಿಎಂ ಯಾರು ಅಂದ್ರೆ ಅದು ಬಸವರಾಜ ಬೊಮ್ಮಾಯಿ. ಕೇಶವ ಕೃಪಾದಲ್ಲಿ ಇವರ ಎಲ್ಲಾ ಅಧಿಕಾರ ಕಸಿದು ಕೂರಿಸಿದ್ದಾರೆ. ಮೇಲಿನಿಂದ ಆರ್ಎಸ್ಎಸ್ನವರು ಕಂಟ್ರೋಲ್ ಮಾಡುತ್ತಿದ್ದಾರೆ. ಇನ್ಮುಂದೆ ಕರ್ನಾಟಕದಲ್ಲಿ ಬಿಜೆಪಿ ಬರಲ್ಲ. ಇವರೇ ಬಿಜೆಪಿಯ ಕೊನೆಯ ಸಿಎಂ ಎಂದು ಭವಿಷ್ಯ ನುಡಿದರು.
ಹುಬ್ಬಳ್ಳಿ ಮೈದಾನ ವಿಚಾರ ಪ್ರಸ್ತಾಪಿಸಿ, ಹುಬ್ಬಳ್ಳಿ ಸಮಾಧಿ ಮುರಿದು ಹಾಕಿದ್ರು. 300 ವರ್ಷದ ಹಳೆಯ ಸಮಾಧಿ ಅದು. ಸಮಾಧಿ ಬಳಿ ಪೊಲೀಸ್ ಕಮಿಷನರ್ ಕಣ್ಣೀರು ಹಾಕಿದ್ದಾರೆ. ಸಿಎಂ ಬೊಮ್ಮಾಯಿ ತಪ್ಪಾಯ್ತು ಅಂತ ಒಪ್ಪಿಕೊಂಡಿದ್ದಾರೆ. ಬರೀ ಶಾಸಕ ಬೆಲ್ಲದ್ ಜಾಗ ಉಳಿಸಲು ಸಮಾಧಿ ಕೆಡವಿದರು ಎಂದು ದೂರಿದರು.
ಇದನ್ನೂ ಓದಿ: ದಲಿತ, ಮುಸ್ಲಿಂ ಅಲ್ಲ.. ಕುಮಾರಸ್ವಾಮಿಯೇ ನಮ್ಮ ಮುಖ್ಯಮಂತ್ರಿ : ಸಿಎಂ ಇಬ್ರಾಹಿಂ