ರಾಯಚೂರು : ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ ನಡೆಸಿದ್ರು.
ಆರಂಭದಲ್ಲಿ ಲಿಂಗಸೂಗೂರು ಪಟ್ಟಣದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ, ಬಳಿಕ ದೇವದುರ್ಗ ತಾಲೂಕಿನ ಮಿಯ್ಯಾಪುರ ಕ್ರಾಸ್ ಗ್ರಾಮ ಬಳಿ ಬೂತ್ ಮಟ್ಟದ ಕಾರ್ಯಕರ್ತರ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು. ದೇಶದ ಒಳಿತಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೆ ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ಗೆ ಮತ ನೀಡುವಂತೆ ಮನವಿ ಮಾಡಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದ ಮೇಲೆ ಎಲ್ಲಾ ಕಡೆಯೂ ಬಿಜೆಪಿ ಸುನಾಮಿ ಉಂಟಾಗಿದೆ. ಈ ಮೊದಲು ನಾವು ಮೊದಲು 22 ಸ್ಥಾನ ಪಡೆಯುತ್ತೇವೆ ಎಂದುಕೊಂಡಿದ್ದೆವು. ಆದ್ರೆ ಈಗ 24 ಕ್ಕೂ ಅಧಿಕ ಸ್ಥಾನ ಪಡೆಯುತ್ತೇವೆ ಅನ್ನೋ ವಿಶ್ವಾಸ ಮೂಡಿದೆ ಎಂದರು.
ಇನ್ನು ಕಾಂಗ್ರೆಸ್ನವರು ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಕರೆಸಲು ಮುಂದಾಗಿದ್ದಾರೆ. ಮುಂದೊಂದು ದಿನ ಕೊನೆಗೆ ಪ್ರಿಯಾಂಕಾ ಗಾಂಧಿ ಮಕ್ಕಳನ್ನು ಕರೆಸುವ ಸ್ಥಿತಿ ಅವೆರಿಗೆ ಬರುತ್ತದೆ ಎಂದು ಶೆಟ್ಟರ್ ಗೇಲಿ ಮಾಡಿದ್ರು.
ಮತ್ತೊಂದೆಡೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ಗೆ ಸಿಎಂ ಕುಮಾರಸ್ವಾಮಿ ನಾನಾ ರೀತಿಯ ತೊಂದರೆ ಕೊಡುತ್ತಿದ್ದಾರೆ ಎಂದು ಶೆಟ್ಟರ್ ದೂರಿದರು. ಅಲ್ಲದೆ ಸುಮಲತಾ ಗಟ್ಟಿಗಿತ್ತಿಯಾಗಿದ್ದರಿಂದ ಎಲ್ಲವನ್ನು ಎದುರಿಸಿ ನಿಂತಿದ್ದಾರೆ. ಚುನಾವಣೆ ನಂತರ ಸರ್ಕಾರ ಬದಲಾವಣೆ ಆಗುತ್ತೆ, ಕಾದು ನೋಡಿ ಎಂದರು.