ರಾಯಚೂರು: ನಗರಸಭೆಯ ದಿನಗೂಲಿ ಕಾರ್ಮಿಕರಿಗೆ ಬಾಕಿ ವೇತನ ಪಾವತಿ ಮಾಡಬೇಕು ಹಾಗೂ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ನೇಮಕ ಆದೇಶ ರದ್ದುಪಡಿಸಬೇಕೆಂದು ಆಗ್ರಹಿಸಿ ಡಿಸಿಎಂ ಗೋವಿಂದ್ ಕಾರಜೋಳ ಅವರಿಗೆ ಪೌರ ಕಾರ್ಮಿಕರು ಮುತ್ತಿಗೆ ಹಾಕಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆ ಮುಗಿಸಿ ತೆರಳುತ್ತಿದ್ದಾಗ ಈ ಘಟನೆ ನಡೆಯಿತು. ನಂತರ ಸ್ಥಳದಲ್ಲಿಯೇ ಇದ್ದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಡಿಸಿಎಂ ಅವರ ಕಾರಿಗೆ ದಾರಿ ಮಾಡಿಕೊಟ್ಟರು.
2017ರಲ್ಲಿ ಜಿಲ್ಲಾಧಿಕಾರಿಗಳ ಸಕ್ರಮಾತಿ ಹೆಸರಿನಲ್ಲಿ 80 ಜನ ನಕಲಿ ಪೌರಕಾರ್ಮಿಕರನ್ನು ನಿಯಮಬಾಹಿರವಾಗಿ ನೇಮಕ ಮಾಡಿಕೊಂಡಿದ್ದು, ಇದನ್ನು ರದ್ದುಪಡಿಸಬೇಕು. ಪೌರ ಕಾರ್ಮಿಕರ 4 ತಿಂಗಳ ವೇತನ ಪಾವತಿ ಮಾಡದೇ, ಪಿಎಫ್,ಇಎಸ್ಐ ಜಮಾ ಮಾಡುತ್ತಿಲ್ಲ ಎಂದು ದೂರಿದರು. ಬೇಡಿಕೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ತುರ್ತುಕ್ರಮ ಕೈಗೊಳ್ಳಬೇಕು ಎಂದು ಡಿಸಿಎಂ ಕಾರಜೋಳ ಅವರಿಗೆ ಪೌರ ಕಾರ್ಮಿಕರು ಒತ್ತಾಯಿಸಿದರು.