ರಾಯಚೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಪರಿಹಾರ ನೀಡುವದರಲ್ಲಿ ಸ್ಪಂದಿಸುತ್ತಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಜಿಲ್ಲೆಯ ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬರಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಮಂತ್ರಿ ಸೀತಾರಾಮನ್ ಅವರನ್ನು ಭೇಟಿಯಾಗಿ ಬಂದಿದ್ದೇವೆ. ಆದರೆ ಇದುವರೆಗೂ ಹಣ ಕೊಟ್ಟಿಲ್ಲ, ಸಭೆಯನ್ನೂ ಸಹ ನಡೆಸಿಲ್ಲ ಎಂದರು.
ಕೇಂದ್ರಕ್ಕೆ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಹಣ: ಅವರು ತಮ್ಮಿಂದ ಹಣ ಏನೂ ಕೊಡಲ್ಲ, ನಮ್ಮ ರಾಜ್ಯದಿಂದ ಪಾವತಿ ಮಾಡಿರುವ ತೆರಿಗೆ ಹಣ ಕೊಡುವರು. ರಾಜ್ಯದಿಂದ 4 ಲಕ್ಷ ಕೋಟಿ ರೂ.ಗಿಂತ ಹೆಚ್ಚು ತೆರಿಗೆ ಕೊಡುತ್ತೇವೆ. ಅದರಲ್ಲಿ 52 ಸಾವಿರ ಕೋಟಿ ರೂ. ಮಾತ್ರ ನಮಗೆ ವಾಪಸು ಬರುತ್ತೆ. ಪ್ರಧಾನಿ ಅವರು ಬರೀ ಮಾತಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತಾರೆ ಎಂದು ವ್ಯಂಗ್ಯವಾಡಿದರು.
ಜನರ ನಿರೀಕ್ಷೆ ಹುಸಿ ಮಾಡದಂತೆ 7 ತಿಂಗಳಿಂದ ಆಡಳಿತ ಕೊಟ್ಟಿದ್ದೇವೆ, ಮುಂದೆಯೂ ಮಾಡುತ್ತೇವೆ, ಚುನಾವಣೆ ಮುನ್ನ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ಅದರಂತೆ 7 ತಿಂಗಳಲ್ಲಿ 4 ಗ್ಯಾರಂಟಿ ಜಾರಿಯಾಗಿವೆ, ಯುವ ನಿಧಿ ನೋಂದಣಿ ಶುರುವಾಗಿದೆ. ಪದವೀಧರ ನಿರುದ್ಯೋಗಿಗಳಿಗೆ ₹3000, ಡಿಪ್ಲೊಮಾ ನಿರುದ್ಯೋಗಿಗಳಿಗೆ ₹1500 ಜಾರಿ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದರು.
ರಾಜ್ಯ ಆರ್ಥಿಕವಾಗಿ ಸುಭದ್ರ : ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ಮುಖಂಡರು ಗ್ಯಾರಂಟಿ ಸಾಧ್ಯವಿಲ್ಲ ಅಂತ ಹೇಳಿದ್ರು. ಜಾರಿಯಾದ್ರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತೆ ಅಂದಿದ್ರು, ಈಗ ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ. ನಾವು 7 ತಿಂಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇದರ ಜೊತೆಗೆ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ. ಇದನ್ನೂ ಬಿಜೆಪಿಯವರಿಗೆ ಹೇಳಬೇಕು, ಮಿಸ್ಟರ್ ನರೇಂದ್ರ ಮೋದೀಜಿ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ, ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಅಂತ ಹೇಳಿದ್ದೇವೆ. ಅದೇ ರೀತಿ ನಡೆದುಕೊಂಡಿದ್ದೇವೆ ಎಂದು ಹೇಳಿದರು.
ಶಕ್ತಿ ಯೋಜನೆಯಡಿ 120 ಕೋಟಿಗೂ ಹೆಚ್ಚು ಜನ ಮಹಿಳೆಯರು ಫ್ರೀ ಆಗಿ ಓಡಾಡುತ್ತಿದ್ದಾರೆ, ಇದು ಎಲ್ಲಿಯೂ ಸಾಧ್ಯವಾಗಿಲ್ಲ, ನಮ್ಮಲ್ಲಿ ಮಾತ್ರ ಉಚಿತವಾಗಿ ಓಡಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ 1 ಕೋಟಿ 16 ಲಕ್ಷ ಮಹಿಳೆಯರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ, ಮಧ್ಯವರ್ತಿಗಳಿಲ್ಲದೇ ಫಲಾನುಭವಿಗಳಿಗೆ ತಲುಪಿಸಿದ್ದೇವೆ ಎಂದು ಸಿಎಂ ಹೇಳಿದರು.
ಕೆಲ ದೇಶದಲ್ಲಿ ಯುನಿವರ್ಸಲ್ ಬೇಸಿಕ್ ಇನ್‌ಕಂ ಎಂದು ನೀಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ 4 ರಿಂದ 5 ಸಾವಿರ ರೂಪಾಯಿ ಪ್ರತಿ ತಿಂಗಳು ಬಡಕುಟುಂಬಕ್ಕೆ ಸಿಗುತ್ತಿದೆ ಎಂದು ತಿಳಿಸಿದರು.
27 ಸಾವಿರ ಎಕರೆಗೆ ತುಂಗಭದ್ರಾ ಎಡದಂಡೆ ನೀರು: ತುಂಗಭದ್ರಾ ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶದ 27 ಸಾವಿರ ಎಕರೆಗೆ ನೀರು ಸಿಗುತ್ತಿರಲಿಲ್ಲ. ಆದ್ರೆ ರೈತರು ಶಾಸಕ ಹಂಪನಗೌಡ ಬಾದರ್ಲಿ ಮೇಲೆ ಒತ್ತಡ ಹಾಕುತ್ತಿದ್ದರು, 2019 ರಲ್ಲಿ ಶಾಸಕರು ನನ್ನ ಗಮನಕ್ಕೆ ತಂದಿದ್ದರು. ನಾನು ಸಿಎಂ ಇದ್ದೆ 90 ಕೋಟಿ 60 ಲಕ್ಷ ರೂಪಾಯಿಯ ಯೋಜನೆ ರೂಪಿಸಿದ್ದೇವೆ. 1.58 ಟಿಎಂಸಿ ನೀರನ್ನ 27 ಸಾವಿರ ಎಕರೆಗೆ ಕೊಡುತ್ತೇವೆ, ಹಿಂದುಳಿದ ಜನ ಇರುವ ಪ್ರದೇಶದ ಜಮೀನುಗಳಿಗೆ ನೀರು ಕೊಡುತ್ತಿದ್ದೇವೆ. ಸಿಂಧನೂರು ತಾಲೂಕಿಗೆ 80% ನೀರಾವರಿ ಸೌಲಭ್ಯ ಸಿಕ್ಕಿದೆ ಎಂದು ಸಿಎಂ ಹೇಳಿದರು.
ನವಲಿಯಲ್ಲಿ ಜಲಾಶಯ ನಿರ್ಮಾಣ: ತುಂಗಭದ್ರಾ ಡ್ಯಾಂನಲ್ಲಿ 32 ಟಿಎಂಸಿಯಷ್ಟು ಹೂಳು ತುಂಬಿದೆ, ತುಂಗಭದ್ರಾ ನೀರು ಆಂಧ್ರಪ್ರದೇಶಕ್ಕೆ ಹೋಗುತ್ತಿದೆ, ನೀರು ಹಂಚಿಕೆಯಾಗುತ್ತಿದೆ. ಇದರಿಂದ ನಮಗೂ ಅನುಕೂಲ ಇಲ್ಲ. ಆಂಧ್ರಕ್ಕೂ ಅನುಕೂಲ ಇಲ್ಲ, ನವಲಿ ಸಮನಾಂತರ ಜಲಾಶಯಕ್ಕೆ ರೈತರು ಶಾಸಕರು ಒತ್ತಾಯ ಮಾಡಿದ್ದಾರೆ, ನಮ್ಮ ಸರ್ಕಾರ ಮಾಡುತ್ತೆ ಅಂತ ಭರವಸೆ ಕೊಡುತ್ತೇನೆ, ನಮ್ಮ ಪಾಲಿನ ನೀರು ಖೋತಾ ಆಗುತ್ತಿದೆ, ಅದನ್ನು ಬಳಸಿಕೊಳ್ಳಲು ಸಮಾನಾಂತರ ಜಲಾಶಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂಓದಿ:'ಹಿಂದುಳಿದವರಿಗೆ ಸಮಾನತೆ ದೊರೆತಾಗ ಮಾತ್ರ ಸ್ವಾತಂತ್ರ್ಯ ಸಾರ್ಥಕ': ಸಿಎಂ ಸಿದ್ದರಾಮಯ್ಯ