ರಾಯಚೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷ ಕೃಷಿ ಮೇಳ ವೈಭವದಿಂದ ನಡೆಸಲಾಗಿತ್ತು. ಆದ್ರೆ ಪ್ರಸಕ್ತ ವರ್ಷ ಕೋವಿಡ್-19, ಅತಿವೃಷ್ಟಿ ಉಂಟಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳವನ್ನು ಕೈಬಿಡಲಾಗಿದೆ.
ಆರು ಜಿಲ್ಲೆಗಳನ್ನು ಒಳಗೊಂಡ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಮೂರು ದಿನಗಳ ಕಾಲ ಕೃಷಿ ಮೇಳವನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿತ್ತು. ಆದ್ರೆ ಈ ಬಾರಿ ಕೊರೊನಾ ಹಾಗೂ ಅತಿವೃಷ್ಟಿ ಪರಿಣಾಮದಿಂದಾಗಿ ಮೂರು ದಿನಗಳು ನಡೆಯುತ್ತಿದ್ದ ಕೃಷಿ ಮೇಳವನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕುಲಪತಿ ಡಾ. ಕೆ ಎನ್ ಕಟ್ಟಿಮನಿ ಅವರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಈ ಕೃಷಿ ಮೇಳದಲ್ಲಿ ಕೃಷಿ ವಿವಿ ನಡೆಸಿದ ಸಂಶೋಧನೆ, ರೈತರ ಸಾಧನೆ, ಹೊಸ ತಳಿಗಳ ವೃದ್ಧಿ, ಕೃಷಿಯಲ್ಲಿನ ಪ್ರಯೋಗ, ಆಧುನಿಕ ವಸ್ತುಗಳು, ರೈತರಿಗೆ ಸಲಹೆ ಸೂಚನೆಗಳು, ವಿವಿ ಆವಿಷ್ಕಾರಿಸಿದ ಯಂತ್ರಗಳು ಸೇರಿದಂತೆ ನಾನಾ ವಿಷಯಾಧಾರಿತವಾಗಿ ಕೃಷಿ ಮೇಳ ನಡೆಸಿಕೊಂಡು ಬರಲಾಗುತ್ತಿತ್ತು. ಕಳೆದ ವರ್ಷ 2019 ರಲ್ಲಿ ನಡೆದ ಮೇಳದಲ್ಲಿ ಸರಿ ಸುಮಾರು ಆರು ಲಕ್ಷ ಜನ ಭಾಗವಹಿಸಿದ್ದರು. ಪ್ರಸಕ್ತವಾಗಿ ಕೊರೊನಾ ಸೋಂಕಿನ ಭೀತಿ ಹಾಗೂ ಕೆಲ ತಿಂಗಳು ಸುರಿದ ಮಳೆಯಿಂದ ಸಂಭವಿಸಿದ ಹಾನಿಯಿಂದಾಗಿ ಕೃಷಿ ಮೇಳವನ್ನು ಈ ಬಾರಿ ನಡೆಸುತ್ತಿಲ್ಲ ಎಂದು ಡಾ. ಕಟ್ಟಿಮನಿ ಮಾಹಿತಿ ನೀಡಿದರು.
ಓದಿ: ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ; ಸಂಸದ ರಾಘವೇಂದ್ರ ಮನವೊಲಿಕೆಗೆ ಜಗ್ಗದ ಅನ್ನದಾತರು
ಒಟ್ಟಿನಲ್ಲಿ ಕೊರೊನಾ ಸೋಂಕಿನ ಭೀತಿ ಎಲ್ಲಾ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಿಂದಾಗಿ ವಾರ್ಷಿಕವಾಗಿ ನಡೆಯುವಂತೆ ಹಲವು ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ.